ಉಡುಪಿ: ಸೆ.15ಕ್ಕೆ ಮುಂಬೈ ಅಲಾರೆ ಗೋವಿಂದ ತಂಡ ಪ್ರದರ್ಶನ

ಉಡುಪಿ: ಸೆ.15ರಂದು ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ಪ್ರಯುಕ್ತ ಶ್ರೀಸಾಯಿಲಕ್ಷ್ಮೀ ಉಡುಪಿ ಸಂಸ್ಥೆಯ ಮೂಲಕ ಮುಂಬಯಿಯ ಅಲಾರೆ ಗೋವಿಂದ ತಂಡ ಉಡುಪಿ ನಗರದಾದ್ಯಂತ ಅಲಾರೆ ಗೋವಿಂದ ಪ್ರದರ್ಶನ ನೀಡಲಿದೆ ಎಂದು ಕಾರ್ಯಕ್ರಮದ ಸಹ ಸಂಯೋಜಕ ಸಂತೋಷ್ ಡಿ.ಸುವರ್ಣ ಉದ್ಯಾವರ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಸಾಯಿಲಕ್ಷ್ಮೀಯ ಮಧುಸೂದನ ಪೂಜಾರಿ ಕೆಮ್ಮಣ್ಣು ಇವರು ಕಳೆದ 13 ವರ್ಷಗಳಿಂದ ಮುಂಬಯಿಯ ಪ್ರಸಿದ್ಧ ಅಲಾರೆ ಗೋವಿಂದ ತಂಡವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಉಡುಪಿ ಕರೆತಂದು ಪ್ರದರ್ಶನ ಏರ್ಪಡಿ ಸುತಿದ್ದಾರೆ ಎಂದರು.
ಈ ಬಾರಿ ಮುಂಬೈ ಸಾಂತಕ್ರೂಸ್ ಪೂರ್ವದ ಬಾಲಮಿತ್ರ ವ್ಯಾಯಾಮ ಶಾಲೆಯ 200 ಮಂದಿ ಅಲಾರೆ ಗೋವಿಂದ ತಂಡ ಸದಸ್ಯರು ಉಡುಪಿಗೆ ಬಂದು ಸೆ.15ರಂದು ನಗರದಲ್ಲಿ 10 ಪ್ರದರ್ಶನವನ್ನು ನೀಡಲಿದ್ದಾರೆ ಎಂದು ವಿವರಿಸಿದರು.
ಮಧುಸೂದನ ಪೂಜಾರಿ ಕೆಮ್ಮಣ್ಣು ಮಾತನಾಡಿ, ಮುಂಬಯಿಯಲ್ಲಿ ತಾವು ಸೂರ್ಯೋದಯ ಕ್ರೀಡಾ ಮಂಡಲವನ್ನು ಸ್ಥಾಪಿಸಿ ಅದರ ಮೂಲಕ ಅಲಾರೆ ಗೋವಿಂದ ತಂಡವನ್ನು ರಚಿಸಿದ್ದು, ಅದು ಮುಂಬಯಿಯಲ್ಲಿ ಪ್ರತಿ ವರ್ಷ ಅಷ್ಟಮಿ ಸಂದರ್ಭದಲ್ಲಿ ಪ್ರದರ್ಶನ ನೀಡಿ ಅಲ್ಲಿನ ಪ್ರಮುಖ ತಂಡವಾಗಿ ಗುರುತಿಸಿಕೊಂಡಿದೆ ಎಂದರು.
ಈ ಬಾರಿ ಉಡುಪಿಯಲ್ಲಿ ಬಾಲಮಿತ್ರ ವ್ಯಾಯಾಮ ಶಾಲಾ ಅಲಾರೆ ಗೋವಿಂದ ತಂಡ, 10 ಕಡೆಗಳಲ್ಲಿ ಪ್ರದರ್ಶನ ನೀಡಲಿದೆ. ಬೆಳಗ್ಗೆ 9:30ಕ್ಕೆ ರಥಬೀದಿಯ ಕನಕಗೋಪುರ ಎದುರು, ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಅಲಾರೆ ಗೋವಿಂದದ ಉದ್ಘಾಟನೆ ನಡೆಯಲಿದೆ ಎಂದು ಮಧುಸೂದನ್ ತಿಳಿಸಿದರು.
ಅನಂತರ ನಿಗದಿತ ಸಮಯದಲ್ಲಿ ಕುಂಜಿಬೆಟ್ಟು, ನಂದಾ ಗೋಲ್ಡ್ ಎದುರು, ಸಂಸ್ಕೃತ ಕಾಲೇಜು ಬಳಿ, ಡೆಂಟಾ ಕೇರ್ ಸರ್ಕಲ್, ಮಿತ್ರಪ್ರಿಯ ಆಸ್ಪತ್ರೆ, ಶ್ಯಾಮಿಲಿ ಸಭಾಂಗಣ ಅಂಬಲಪಾಡಿ, ಆದಿ ಉಡುಪಿ ಜಂಕ್ಷನ್, ಮಿಷನ್ ಕಾಂಪೌಂಡ್ ಹಾಗೂ ಅಂಬಾಗಿಲುಗಳಲ್ಲಿ ಅಲಾರೆ ಗೋವಿಂದ ಪ್ರದರ್ಶನ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಜಯ ಪೂಜಾರಿ ಲಕ್ಷ್ಮೀನಗರ, ಸುಧಾಕರ ಕೋಟ್ಯಾನ್ ನೇಜಾರು ಉಪಸ್ಥಿತರಿದ್ದರು.







