ಜಿಲ್ಲೆಯಲ್ಲಿ ಪ್ರತಿವರ್ಷ 1,500 ಕ್ಷಯರೋಗ ಪ್ರಕರಣಗಳು ಪತ್ತೆ’

‘ಉಡುಪಿ, ಮಾ.24: ಕ್ಷಯರೋಗಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ 40ರಿಂದ 45,000 ಕ್ಷಯ ರೋಗ ಪರೀಕ್ಷೆಗಳನ್ನು ಮಾಡಲಾಗುತಿದ್ದು, ಇವುಗಳಿಂದ ಸುಮಾರು 1,500ರಷ್ಟು ಕ್ಷಯ ರೋಗ ಪ್ರಕರಣಗಳು ಪತ್ತೆ ಹಚ್ಚಲಾಗುತ್ತಿದೆ. ಇದರಲ್ಲಿ 500-600 ಪ್ರಕರಣಗಳು ಹೊರ ಜಿಲ್ಲೆಗೆ ಸಂಬಂಧಿಸಿದ್ದಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲ ನಾಧಿಕಾರಿ ಡಾ.ಚಿದಾನಂದ ಸಂಜು ತಿಳಿಸಿದ್ದಾರೆ.
ನಗರದ ಅಜ್ಜರಕಾಡಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಶ್ರೀಕೃಷ್ಣ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ, ಕ್ಷಯ ಮುಕ್ತ ಗ್ರಾಮ ಪಂಚಾಯತ್ ಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕ್ಷಯ ಮುಕ್ತ ಭಾರತ್-100 ದಿನಗಳ ಅಭಿಯಾನದಲ್ಲಿ ಪ್ರಾಸ್ತಾವಿಕ ಮಾತುಗಳಲ್ಲಿ ಈ ವಿವರ ನೀಡಿದರು.
ಪ್ರತೀ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕ್ಷಯ ರೋಗವನ್ನು ಪತ್ತೆಹಚ್ಚಲು 3 ಸಿಬಿನ್ಯಾಟ್ ಯಂತ್ರಗಳು 8 ಟ್ರುನ್ಯಾಟ್ ಯಂತ್ರಗಳಿದ್ದು, ಅವುಗಳ ಮೂಲಕ ಪ್ರತೀ ವರ್ಷ 40,000-45,000 ಕ್ಷಯ ರೋಗ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಪತ್ತೆಯಾಗುವ 1,500 ಪ್ರಕರಣಗಳಲ್ಲಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಯರೋಗದಿಂದ ಉಂಟಾಗುವ ಮರಣ ಪ್ರಮಾಣ ವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ಷಯರೋಗ ಲಕ್ಷಣ ಹೊಂದಿರುವವರನ್ನು ಮುಂಚಿತವಾಗಿಯೇ ಪತ್ತೆಹಚ್ಚಲು ಕೇಂದ್ರ ಸರಕಾರ ಎಲ್ಲಾ ಜಿಲ್ಲೆಗಳಿಗೂ ಆಂಡ್ರಾಯ್ಡ್ ಎಕ್ಸರೇ ಯಂತ್ರವನ್ನು ನೀಡಿದೆ ಎಂದ ಡಾ.ಚಿದಾನಂದ್, ಇದನ್ನು ಶೀಘ್ರದಲ್ಲೇ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ, ಕ್ಷಯರೋಗವು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲನ್ನು ಒಡ್ಡುತ್ತಿದ್ದು, ದೇಶದಲ್ಲಿಯೇ ಕ್ಷಯರೋಗ ಮರಣ ತರುವ ಗಂಭೀರ ಕಾಯಿಲೆಗಳಲ್ಲಿ ಮೊದಲನೇ ಸ್ಥಾನದ ಲ್ಲಿದೆ. ಕ್ಷಯರೋಗವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಗಳು, ಸಮನ್ವಯದಿಂದ ಕಾರ್ಯ ನಿರ್ವಹಿಸುವುದರೊಂದಿಗೆ ಉಡುಪಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದರು.
ಜಿಲ್ಲೆಯನ್ನು ಕ್ಷಯಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ನೂರು ದಿನಗಳ ಕ್ಷಯರೋಗ ಪತ್ತೆ ಹಚ್ಚುವ ಅಭಿಯಾನ ವನ್ನು ಇಂದಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನದಲ್ಲಿ ಕ್ಷಯರೋಗಿ ಗಳನ್ನು ಪತ್ತೆಹಚ್ಚಿ, ಅವರುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರೊಂದಿಗೆ ಅವರು ಸಂಪೂರ್ಣವಾಗಿ ಗುಣಮುಖರಾಗು ವವರೆಗೂ ಅವರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಮಾತನಾಡಿ, ಕ್ಷಯ ಮುಕ್ತ ಅಭಿಯಾಣ ದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ತಪಾಸಣೆಗೆ ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು ಎಂದರು.
ಕ್ಷಯ ಮುಕ್ತ ಭಾರತ್ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದ್ದು, ಅಭಿಯಾನದಲ್ಲಿ ಸರಕಾರ ಗುರುತಿಸಿರುವ ಕ್ಷಯ ರೋಗ ಬಾಧಿಸಬಹುದಾದ ಹಳ್ಳಿಗಳಲ್ಲಿ, ದುರ್ಬಲ ವರ್ಗಗಳ ಜನಾಂಗದವರು ವಾಸಿಸುವ ಜನವಸತಿ ಪ್ರದೇಶಗಳಲ್ಲಿ ಟಿ.ಬಿ ಸ್ಕೃಿನಿಂಗ್ ನಡೆಸಿ, ರೋಗ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಂಪೂರ್ಣ ಗುಣಮುಖರಾಗಿ ಮಾಡಲಾ ಗುವುದು ಎಂದರು.
ಗ್ರಾಪಂಗಳಿಗೆ ಬಹುಮಾನ: ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಎಂದು ಆಯ್ಕೆ ಮಾಡಲಾದ 64 ಗ್ರಾಮ ಪಂಚಾಯತ್‌ಗಳಲ್ಲಿ 18 ಗ್ರಾಮ ಪಂಚಾಯತ್‌ಗಳಿಗೆ ಕಂಚಿನ ಪದಕ, 26 ಗ್ರಾಮ ಪಂಚಾಯತ್‌ಗಳಿಗೆ ಬೆಳ್ಳಿ ಪದಕ ಹಾಗೂ 20 ಗ್ರಾಮ ಪಂಚಾಯತ್‌ಗಳಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಶಾಂತ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಆಲಂದೂರು ಮಂಜುನಾಥ ಎಸ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಜೈನ್ ವಂದಿಸಿದರು.







