ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗೆ ಮಾ.16ರಂದು ‘ಮಹಾಭಿವಂದ್ಯ’

ಉಡುಪಿ, ಮಾ.13: ಧರ್ಮಸ್ಥಳ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಜಗದ್ಗುರು ಪೀಠದ ಶ್ರೀಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ಇವರಿಗೆ ಇದೇ ಮಾ.16ರ ರವಿವಾರ ಸಂಜೆ ಸಾರ್ವಜನಿಕ ಗೌರವಾರ್ಪಣೆ ಹಾಗೂ ಅಭಿನಂದನಾ ಸಮಾರಂಭ ‘ಮಹಾಭಿವಂದ್ಯ’ ನಗರದ ಬನ್ನಂಜೆಯಲ್ಲಿರುವ ಶ್ರೀನಾರಾಯಣಗುರು ಸಭಾಂಗಣದಲ್ಲಿ ನಡೆಯಲಿದೆ ಎಂದು ಯುವ ವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾ.16ರ ರವಿವಾರ ಸಂಜೆ 4:00ಗಂಟೆಗೆ ನಡೆಯುವ ಈ ಅಭಿನಂದನಾ ಕಾರ್ಯಕ್ರಮವನ್ನು ಬಿಲ್ಲಾಡಿಯ ಆತ್ಮಾ ನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯ, ಧರ್ಮಸ್ಥಳ ಶ್ರೀರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಉಡುಪಿ ಹಾಗೂ ಯುವವಾಹಿನಿ ಉಡುಪಿ ಘಟಕದ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.
144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಇತ್ತೀಚಿಗೆ ಪ್ರಯಾಗರಾಜ್‌ನಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರದ ಸದ್ಗುರುಗಳಾದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಜುನಾ ಅಖಾಡದ 1008 ಮಹಾಮಂಡಲೇಶ್ವರ ಪದವಿಯೊಂದಿಗೆ ಪಟ್ಟಾಭಿಷಿಕ್ತರಾಗಿರುವ ಹಿನ್ನೆಲೆಯಲ್ಲಿ ಈ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪರಮಪೂಜ್ಯ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ದೀಕ್ಷಾಬದ್ದರಾಗಿ ಅವರ ಉತ್ತಾರಾ ಧಿಕಾರಿಯಾಗಿ ಶ್ರೀಕ್ಷೇತ್ರವನ್ನು ಮುನ್ನಡೆಸುತ್ತಿರುವ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ನೀಡುವ ಮಹಾಮಂಡಲೇಶ್ವರ ಪದವಿಯನ್ನು ಪ್ರದಾನ ಮಾಡಲಾಗಿದೆ. ಈ ಸಂತ ಪದವಿಯು ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತೀಯ ಸಂತರೊಬ್ಬರಿಗೆ ದೊರಕಿದ ಧನ್ಯತೆಯೂ ನಮಗಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ನಡೆಯುವ ‘ಮಹಾಭಿವಂದ್ಯ’ ಕಾರ್ಯಕ್ರಮವನ್ನು ಉಡುಪಿಯ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಉದ್ಘಾಟಿಸಲಿ ದ್ದಾರೆ. ಆತ್ಮಾನಂದ ಸರಸ್ವತಿ ಕಿರಿಯ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಓಬು ಪೂಜಾರಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಕೆ. ರಘುಪತಿ ಭಟ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ.
ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ಸಚಿವ ಮಾಂಕಾಳ ವೈದ್ಯ ಅಭಿನಂದನಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಅಲ್ಲದೇ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿ ಕಾರಿ ಪದ್ಮರಾಜ್ ಆರ್., ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಓಬು ಪೂಜಾರಿ, ಯುವವಾಹಿನಿಯ ರಘುನಾಥ ಮಾಬಿಯಾನ್, ಭಾಸ್ಕರ ಸುವರ್ಣ, ನಾರಾಯಣ ಬಿ.ಎಸ್. ಹಾಗೂ ಮಹಾಬಲ ಅಮೀನ್ ಉಪಸ್ಥಿತರಿದ್ದರು.