ಕಾರ್ಕಳ: ರಾ ಹೆ 169ರ ಸಾಣೂರು ಮುರತಂಗಡಿ ಸರ್ವೀಸ್ ರಸ್ತೆ ಬದಿ ಭೂಕುಸಿತ: ಪ್ರಯಾಣಿಕರ ಪರದಾಟ

ಕಾರ್ಕಳ: ಕಳೆದ ಮೂರು ವಾರಗಳಿಂದ ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169 ಮುರತಂಗಡಿ ಪ್ರಶಾಂತ ಕಾಮತ್ ಎಂಬವರ ಮನೆಯ ಮುಂಭಾಗದ ಸರ್ವೀಸ್ ರಸ್ತೆ ಬದಿಯ ಮಣ್ಣು ಕುಸಿದು ಹೊಂಡ ಸೃಷ್ಟಿಯಾಗಿದೆ.
ಈಗಾಗಲೇ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಒಂದೆರಡು ಬಾರಿ ರಸ್ತೆ ಬದಿಗೆ ಕೆಂಪು ಮಣ್ಣು ಸುರಿದು ಹೊಂಡವನ್ನು ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಮಳೆಗೆ ಈ ಮಣ್ಣು ನೀರಿನೊಂದಿಗೆ ಕರಗಿ ಸರ್ವೀಸ್ ರಸ್ತೆ ಇಡೀ ರಾಡಿ ಎದ್ದಿದೆ. ಇದು ದ್ವಿಚಕ್ರ ವಾಹನಗಳ ಅಪಘಾತಕ್ಕೂ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಪ್ರದೇಶದಲ್ಲಿ ಎರಡು ಹೋಟೆಲ್ ಗಳಿದ್ದು, ಲಾರಿ ಕಾರು ಇನ್ನಿತರ ಘನ ವಾಹನಗಳು ಸರ್ವೀಸ್ ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿದರೆ ಮಣ್ಣು ಇನ್ನಷ್ಟು ಕುಸಿದರೆ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಇಲ್ಲಿನ ಸರ್ವೀಸ್ ರಸ್ತೆ ಬದಿಯಲ್ಲಿ ಕುಸಿದಿರುವ ಭಾಗಕ್ಕೆ ಕಲ್ಲು ಅಥವಾ ಕಾಂಕ್ರಿಟ್ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇಲ್ಲಿ ಅನಾಹುತ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪೆನಿಯೇ ಜವಾಬ್ದಾರಿ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.