ರಾ.ಹೆದ್ದಾರಿ 169-ಎಗೆ ಜಾಗ ನೀಡಿದ ಭೂಮಾಲಕರಿಗೆ ಹಣ ಪಾವತಿಸಲು ಸೂಚನೆ

ಉಡುಪಿ, ಜೂ.23: ಉಡುಪಿಯ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ 169-ಎ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆಸಲಾಯಿತು.
ರಾ.ಹೆದ್ದಾರಿ ನಿರ್ಮಾಣಕ್ಕಾಗಿ ಮಾಡಲಾದ ಒಟ್ಟು 229 ಭೂಸ್ವಾಧೀನ ಪ್ರಕರಣದಲ್ಲಿ 19 ಡಿವಿಜನ್ ನೇರ ಸರಕಾರದ ಹೆಸರಿನಲ್ಲಿದ್ದು, ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಉಳಿದ 208 ಭೂ ಸ್ವಾಧೀನ ಪ್ರಕರಣದಲ್ಲಿ 132 ಭೂ ಸ್ವಾಧೀನ ಪ್ರಕರಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹೀಗೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ 98 ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಕೋಟಿ 55 ಲಕ್ಷ ರೂ.ಗಳನ್ನು ಖಾತೆದಾರರಿಗೆ ಪಾವತಿಸಲಾಗಿದೆ. ಇನ್ನುಳಿದ 39 ಡಿವಿಜನ್‌ನ ಭೂ ಸ್ವಾಧೀನ ಪ್ರಕರಣ ದಲ್ಲಿ 3 ಪ್ರಕರಣ ಜಂಟಿ ಖಾತೆಯಲ್ಲಿದ್ದು, 27 ಪ್ರಕರಣದ ಬಗ್ಗೆ ಬ್ಯಾಂಕ್ ಖಾತೆಯ ಪರಿಶೀಲನೆ ನಡೆಯು ತ್ತಿದೆ ಎಂದು ಭೂಸ್ವಾಧೀನ ಅಧಿಕಾರಿ ಸಭೆಗೆ ತಿಳಿಸಿದರು.
ಒಟ್ಟು ಒಂಭತ್ತು ಪ್ರಕರಣಗಳಲ್ಲಿ ಕೌಟುಂಬಿಕ ತಕರಾರು ಇದ್ದು, ಈ ಹಿನ್ನೆಲೆಯಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಹಣವನ್ನು ಕೋರ್ಟ್‌ನಲ್ಲಿ ಡೆಪಾಸಿಟ್ ಇಡಲು ಸೂಚಿಸಲಾಯಿತು. ಮೂಡನಿಡಂಬೂರಿನಲ್ಲಿ 40 ಪ್ರಕರಣ, ಕೊಡವೂರಿನ 50 ಸಣ್ಣಪುಟ್ಟ ಭೂಸ್ವಾಧೀನ ಪ್ರಕರಣವನ್ನು ಕೂಡಲೇ ಸರ್ವೆ ನಡೆಸಿ 3ಡಿ ಪ್ರಸ್ತಾವನೆಯನ್ನು ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಿ, ಜುಲೈ 5ರ ಒಳಗೆ ಸಲ್ಲಿಸಲು ಉಡುಪಿ ತಾಲೂಕಿನ ಎ.ಡಿ.ಎಲ್.ಆರ್‌ಗೆ ಸೂಚನೆ ನೀಡಲಾಯಿತು.
ಅಲ್ಲದೇ ಮಲ್ಪೆಯಿಂದ ಕರಾವಳಿ ಜಂಕ್ಷನ್‌ವರೆಗೆ ಕಾಮಗಾರಿ ನಡೆಸಲು ಯಾವುದೇ ಅಭ್ಯಂತರ ಇಲ್ಲ ವೆಂದು ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಮತ್ತು ಭೂ ಸ್ವಾಧೀನ ಅಧಿಕಾರಿ ರಶ್ಮಿ ಅವರು ಸಭೆಗೆ ತಿಳಿಸಿದರು.
ಕಾಮಗಾರಿ ನಡೆಯುತ್ತಿರುವ ಪರ್ಕಳ ಸಮೀಪದ ರಸ್ತೆ ಹಾಳಾಗಿದ್ದು, ರಸ್ತೆಯನ್ನು ಕೂಡಲೇ ಸರಿಪಡಿಸು ವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸಭೆಗೆ ತಿಳಿಸಿದರು.
ಸಭೆಯಲ್ಲಿ ಭೂಸ್ವಾಧೀನ ಅಧಿಕಾರಿ ರಶ್ಮಿ, ಡಿ.ಡಿ.ಎಲ್.ಆರ್ ರವೀಂದ್ರ, ಎ.ಡಿ.ಎಲ್.ಆರ್ ತಿಪ್ಪರಾಯ ಕೆ. ತೊರ, ಉಡುಪಿ ತಹಶೀಲ್ದಾರ್ ಗುರುಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ನಾಯಕ್, ಉಡುಪಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಜೆ. ಕಲ್ಮಾಡಿ, ಮಂಜು ಕೊಳ ಉಪಸ್ಥಿತರಿದ್ದರು.







