ರಾ.ಹೆದ್ದಾರಿ 169ಎ ಕಾಮಗಾರಿ; ಮರ ಕಡಿಯಲು ಅನುಮತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಉಡುಪಿ, ಜು.2: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಹೆಬ್ರಿ- ಪರ್ಕಳ ಮಧ್ಯದ ಮುಳ್ಳುಗುಡ್ಡೆ ಸಮೀಪ 1.2 ಕಿ.ಮೀ ರಸ್ತೆಯು ಅರಣ್ಯ ಇಲಾಖೆಯ ಜಾಗದಲ್ಲಿ ಹಾದು ಹೋಗುತ್ತಿದ್ದು, ಇದರಲ್ಲಿರುವ ಮರಗಳನ್ನು ಕಡಿಯಲು ಇದೀಗ ತಮ್ಮ ವಿಶೇಷ ಪ್ರಯತ್ನದಿಂದ ಅನುಮತಿ ದೊರಕಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿದ್ದ ಮರಗಳನ್ನು ಕಡಿಯಲು 2023ರಿಂದಲೇ ಪರಿವೇಶ್ ವೆಬ್‌ಸೈಟ್‌ನಲ್ಲಿ ಅರಣ್ಯ ಇಲಾಖೆಯ ಅನುಮೋದನೆಗೆ ಬಾಕಿ ಇದ್ದು, ಇದೀಗ ಕೋಟ ಶ್ರೀನಿವಾಸ ಪೂಜಾರಿ ಅವರ ಸತತ, ವಿಶೇಷ ಪ್ರಯತ್ನದಿಂದಾಗಿ ಕರ್ನಾಟಕ ರಾಜ್ಯ ಸರಕಾರದಿಂದ ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ 2.35 ಹೆಕ್ಟೇರ್ ಪ್ರದೇಶ ಹಾಗೂ ಹೆಬ್ರಿ ಗ್ರಾಮದ 0.064 ಹೆಕ್ಟೇರ್ ಒಟ್ಟಾರೆ 2.49 ಹೆಕ್ಟೇರ್ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೆದ್ದಾರಿ ಕಾಮಗಾರಿ ನಿರ್ವಹಿಸಲು ಅನುಮೋದನೆ ನೀಡಲಾಗಿದೆ ಎಂದು ಸಂಸದರ ಕಚೇರಿ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಂಸದ ಕೋಟ ಅವರು ರಾ.ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದೂ ಹೇಳಿಕೆ ತಿಳಿಸಿದೆ.
ಬೆಳೆವಿಮೆ ಅವಧಿ ವಿಸ್ತರಣೆಗೆ ಮನವಿ: 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ನೊಂದಾವಣಾ ಅವಧಿ ಜೂನ್ 30ರ ಕೊನೆಗೆ ಮುಕ್ತಾಯಗೊಂಡಿದ್ದು, ಬೆಳೆ ವಿಮೆ ಯೋಜನೆಯ ನೊಂದಾವಣೆ ಯನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸುವಂತೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರದ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸಚಿವ ಶಿವರಾಜ್ ಸಿಂಗ್ ಚೌವ್ಹಾನ್ ಮತ್ತು ಕೇಂದ್ರದ ಕೃಷಿ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ವಿಶೇಷವಾಗಿ ಅಡಿಕೆ, ಕಾಳುಮೆಣಸು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ರೈತರು ಆಸಕ್ತಿ ಹೊಂದಿದ್ದಾರೆ. ನಿಗದಿತ ದಿನದೊಳಗೆ ನೊಂದಣಿ ಪೂರ್ಣಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ತಡವಾಗಿ ಬಂದ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನ ಕೃಷಿ ಚಟುವಟಿಕೆ ಹಾಗೂ ರೈತಾಪಿ ವರ್ಗದ ಕೆಲಸದ ಒತ್ತಡ ಗಳಿಂದಾಗಿ ರೈತರು ವಿಮಾ ಸೌಲಭ್ಯವನ್ನು ಪಡೆಯಲು ತೊಂದರೆಯನ್ನು ಅನುಭಸುತ್ತಿದ್ದಾರೆ ಎಂದು ಅವರು ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಅಲ್ಲದೇ, ಬೆಳೆ ವಿಮೆ ಯೋಜನೆಯಡಿ ಇದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸುವುದು ವಿಳಂಬವಾದ ಕಾರಣದಿಂದ ಅನೇಕ ಮಂದಿ ರೈತರು ವಿಮಾ ಯೋಜನೆಯನ್ನು ಪಡೆಯಲು ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂದಿನ 1 ತಿಂಗಳುಗಳ ಕಾಲ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಪ್ರಯೋಜನ ರೈತಾಪಿ ವರ್ಗಕ್ಕೆ ಸಿಗಲು ಅರ್ಜಿ ಸ್ವೀಕಾರದ ಅವಧಿ ವಿಸ್ತರಿಸುವಂತೆ ಕೋಟ ಕೇಂದ್ರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.






