ಮೇ 18ರಿಂದ ಎಸೆಸೆಲ್ಸಿ-2 ಪರೀಕ್ಷೆ: ನಿಷೇಧಾಜ್ಞೆ ಜಾರಿ

ಉಡುಪಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎಸೆಸೆಲ್ಸಿ-2 ಪರೀಕ್ಷೆಗಳು ಇದೇ ಮೇ 18ರಿಂದ 25 ರವರೆಗೆ ಜಿಲ್ಲೆಯ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ, ದೋಷರಹಿತವಾಗಿ ನಡೆಸಲು ಮತ್ತು ಪರೀಕ್ಷೆ ಸಂದರ್ಭದಲ್ಲಿ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಯನ್ನು ಜಾರಿಗೊಳಿಸಲಾಗಿದೆ. ಹಾಗೂ ಪರಿಸರದ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶವನ್ನು ನಿಬರ್ಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಈ ನಿಷೇಧಾಜ್ಞೆ ಆದೇಶವು ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ ಸುತ್ತಲೂ ಮೇ 18ರಿಂದ 25ರವರೆಗೆ ಪರೀಕ್ಷಾ ಅವಧಿಯಲ್ಲಿ ಜಾರಿಯಲ್ಲಿ ರಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






