ಉಡುಪಿ: ಮಾ.19ಕ್ಕೆ ತುಳು ಸಾಹಿತ್ಯ ಸಾಂಸ್ಕೃತಿಕ ಪರ್ಬ ‘ಕುರಲ್’

ಉಡುಪಿ, ಮಾ.17: ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತಂತೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಮಣಿಪಾಲದ ಸಂಗಮ ಕಲಾವಿದೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗ ದೊಂದಿಗೆ ಇದೇ ಮಾ.19ರ ಬುಧವಾರ ಉಡುಪಿ ಕುಂಜಿಬೆಟ್ಟಿನ ಇನ್ಫೋಸಿಸ್ ಯಕ್ಷಗಾನ ಕಲಾರಂಗ (ಐವೈಸಿ) ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿ ಗಳಿಗಾಗಿ ತುಳು ಸಾಹಿತ್ಯ- ಸಾಂಸ್ಕೃತಿಕ ಸ್ಪರ್ಧೆ ‘ಕುರಲ್’ನ್ನು ಆಯೋಜಿಸಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡಕ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂತೋಷ್ ಶೆಟ್ಟಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಂಗಳೂರು ವಿವಿಗೆ ಸೇರಿದ ಕಾಲೇಜುಗಳ ಪದವಿ ವಿದ್ಯಾರ್ಥಿ ಗಳು ತುಳುನಾಡಿಗೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದರು.
ಮಾ.19ರಂದು ಇಡೀ ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ತುಳು ಕವಿತಾ ಸ್ಪರ್ಧೆ, ತುಳು ಭಾಷಣ ಸ್ಪರ್ಧೆ, ತುಳು ಪದ ಕೊಲ್ಕೆ, ತುಳು ನಲಿಕೆ, ಫ್ಯಾಶನ್ ಶೋ ಹಾಗೂ ಪೋಟೊಗ್ರಫಿ ಸ್ಪರ್ಧೆಗಳು ನಡೆಯ ಲಿವೆ ಎಂದು ಸಂತೋಷ್ ಶೆಟ್ಟಿ ತಿಳಿಸಿದರು.
‘ಕುರಲ್’ನ್ನು ಬೆಳಗ್ಗೆ 9:45ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾಗಿರುವ ನಾಗೇಶ್‌ಕುಮಾರ್ ಉದ್ಯಾ ವರ ಭಾಗವಹಿಸಲಿದ್ದಾರೆ. ಉದ್ಘಾಟನೆಯ ಬಳಿಕ ಪಾಂಬೂರು ನವೋದಯ ಕಲಾತಂಡದಿಂದ ಡೋಲು ಪ್ರಾತ್ಯಕ್ಷಿಕೆ ಇದೆ ಎಂದರು.
ಸಮಾರೋಪ ಸಮಾರಂಭ ಸಂಜೆ 4:30ಕ್ಕೆ ನಡೆಯಲಿದ್ದು, ಸಾಹಿತಿ, ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಹಾಗೂ ಉದ್ಯಮಿ ಹರಿಪ್ರಸಾದ್ ರೈ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ವಿಜೇತ ಮೂರು ತಂಡಗಳಿಗೆ ಪ್ರಥಮ ಬಹುಮಾನ 25,000ರೂ, ದ್ವಿತೀಯ 15,000 ಹಾಗೂ ತೃತೀಯ 10,000ರೂ. ನಗದು ಜೊತೆಗೆ ಶಾಶ್ವತ ಫಲಕಗಳನ್ನು ನೀಡಲಾಗುವುದು ಎಂದರು.
ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡದ 10 ಕಾಲೇಜುಗಳಿಂದ 240 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಆಸಕ್ತರು ದೂರವಾಣಿ ಸಂಖ್ಯೆ: 8762080026, 7975489822ನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ಸಂಚಾಲಕ ಶ್ರೇಯಸ್ ಕೋಟ್ಯಾನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಉಪಾಧ್ಯಕ್ಷರಾದ ವೈಷ್ಣವಿ ಭಂಡಾರ್ಕರ್ ಹಾಗೂ ಆನಂದ ನಾಯ್ಕ್ ಉಪಸ್ಥಿತರಿದ್ದರು.







