ಹಿರಿಯಡ್ಕ: ಸೆ.19ರಂದು ಹಳಗನ್ನಡ ಕಾವ್ಯದೋದು ಕಮ್ಮಟ ‘ಕಬ್ಬದುಳುಮೆ’

ಉಡುಪಿ, ಸೆ.17: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ಉಡುಪಿ ಹಾಗೂ ಸರಕಾರಿ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜು ಹಿರಿಯಡಕ ಸಹಯೋಗದಲ್ಲಿ ಹಳಗನ್ನಡ ಕಾವ್ಯದೋದು ಕಮ್ಮಟ ‘ಕಬ್ಬದುಳುಮೆ’ ಸೆ.19ರ ಶುಕ್ರವಾರ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಪ್ರಕಾಶ್ ಶೆಟ್ಟಿ ಎಚ್. ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರು ಹಾಗೂ ಮಂಗಳೂರು ವಿವಿ ವ್ಯಾಪ್ತಿಯ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗಾಗಿ ಈ ಒಂದು ದಿನದ ಕಮ್ಮಟ ಆಯೋಜಿಸಲಾಗಿದೆ ಎಂದರು.
ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ ಎಂದು ಬಣ್ಣಿಸಲಾಗುವ ಹಾಗೂ ಎಲ್ಲರ ತಪ್ಪು ಗ್ರಹಿಕೆಗೆ ಒಳಗಾದ ಪ್ರಾಚೀನ ಕನ್ನಡ ಪಠ್ಯಗಳನ್ನು ಆಪ್ತವಾಗಿಸುವ ಹಾಗೂ ಸಮಕಾಲೀನ ಬದುಕಿನಲ್ಲಿ ಅದರ ಅರಿವನ್ನು ವಿಸ್ತರಿಸುವ ಆಶಯದೊಂದಿಗೆ ‘ಕಬ್ಬದುಳುಮೆ’ ಕಮ್ಮಟ ನಡೆಯಲಿದೆ ಎಂದು ಪ್ರೊ.ಶೆಟ್ಟಿ ವಿವರಿಸಿದರು.
ನಾಡಿನ ಹಿರಿಯ ಸಾಂಸ್ಕೃತಿಕ ಚಿಂತಕ, ಪ್ರಗತಿಪರ ಲೇಖಕ, ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕಮ್ಮಟವನ್ನು ಶುಕ್ರವಾರ ಬೆಳಗ್ಗೆ 9:45ಕ್ಕೆ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರೂ ಆಗಿರುವ ಪ್ರೊ.ಜಯಪ್ರಕಾಶ್ ಶೆಟ್ಟಿ ಆಶಯ ಭಾಷಣ ಮಾಡಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಹಿರಿಯಡಕ ಕೆಪಿಎಸ್‌ನ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಾಳಾವರ ಹಾಗೂ ಹಿರಿಯಡಕ ಕೆಪಿಎಸ್‌ನ ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ್ ಉಪಸ್ಥಿತರಿರುವರು.
ಕಮ್ಮಟದ ಮೊದಲ ಗೋಷ್ಠಿಯಲ್ಲಿ ಹೊಸಕೋಟೆಯ ಸರಕಾರಿ ಕಾಲೇಜಿನ ಪ್ರಾಂಶುಪಾಲರೂ, ವಿಮರ್ಶಕರೂ ಆದ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ‘ಹಳಗನ್ನಡ ಕಾವ್ಯ: ಓದಿನ ಸವಾಲು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ, ಎರಡನೇ ಗೋಷ್ಠಿಯಲ್ಲಿ ಪ್ರೊ.ಜಯಪ್ರಕಾಶ್ ಶೆಟ್ಟಿ ಅವರು ‘ಪದವಿ ಪೂರ್ವ ಪಠ್ಯ ಮತ್ತು ಹಳೆಗನ್ನಡ ಕಾವ್ಯಭಾಗ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ಅವರು ಕುವೆಂಪು ಗಾಯನ ಹಾಡಲಿದ್ದಾರೆ. ಸಮಾರೋಪ ಸಮಾರಂಭ 3:30ಕ್ಕೆ ಉಡುಪಿಯ ಡಿಡಿಪಿಯು ಮಾರುತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಕಾರ್ಯದಶಿ ಸುಬ್ರಹ್ಮಣ್ಯ ಜೋಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಕೆಪಿಎಸ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಇತರರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಾವರ ನಾಗೇಶ್ ಕುಮಾರ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸೌಮ್ಯಲತಾ ಪಿ., ನಾಗರಾಜ್ ಎನ್.ಇ., ಡಾ.ಲಿತಿನ್ ಬಿ.ಎಂ. ಉಪಸ್ಥಿತರಿದ್ದರು.







