ಮಣಿಪಾಲ: ಸೆ.19ರಂದು ಬೈಂದೂರು ತಾಲೂಕು ರೈತ ಸಂಘದಿಂದ ಪ್ರತಿಭಟನೆ

ಉಡುಪಿ, ಸೆ.18: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿ ರುವುದನ್ನು ವಿರೋಧಿಸಿ, ಕೂಡಲೇ ಅವುಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘ ಹಾಗೂ ಗ್ರಾಮಸ್ಥರು ಸೆ.19ರ ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಸುದ್ದಿಗಾರರಿಗೆ ಈ ವಿಷಯದ ತಿಳಿಸಿದ ಅವರು, ಐದು ವರ್ಷಗಳ ಹಿಂದೆ ಸ್ಥಳೀಯರು ಹಾಗೂ ವಿವಿಧ ಪಕ್ಷಗಳೊಂದಿಗೆ ಚರ್ಚಿಸದೇ ಅಧಿಕಾರಿಗಳು ಪಟ್ಟಣ ಪಂಚಾಯತ್‌ನ್ನು ರಚಿಸಿದ್ದು, ಇದುವರೆಗೆ ಚುನಾವಣೆ ನಡೆದು ಪ.ಪಂ. ಅಸ್ತಿತ್ವಕ್ಕೆ ಬಂದಿಲ್ಲ. ಆದರೆ ಇದೀಗ ಪಟ್ಟಣ ಪಂಚಾಯತ್‌ನ 20 ವಾರ್ಡುಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದವರು ಹೇಳಿದರು.
ಬೈಂದೂರು ಪಟ್ಟಣ ಪಂಚಾಯತ್ 54ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದರಲ್ಲಿ ಶೇ.47ರಷ್ಟು ದಟ್ಟ ಕಾಡು ಪ್ರದೇಶವಾಗಿದ್ದು, ಗ್ರಾಮೀಣ ಭಾಗವಾಗಿದೆ. ಇದರಿಂದಾಗಿ ಇಲ್ಲಿನ ಜನರು ಸರಕಾರದ ವಿವಿಧ ಯೋಜನೆ ಗಳಿಂದ ವಂಚಿತರಾಗಿದ್ದಾರೆ ಎಂದವರು ಹೇಳಿದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಈಗಾಗಲೇ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ ಗಳು 11 ವಾರ್ಡ್‌ಗಳಿರುವ ಹೊಸ ಬೈಂದೂರು ಪಟ್ಟಣ ಪಂಚಾಯತ್ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಅದನ್ನು ಜಾರಿಗೊಳಿಸುವಂತೆ ಹಾಗೂ ಉಳಿದ ಗ್ರಾಮೀಣ ಭಾಗಗಳನ್ನು ಕೈಬಿಟ್ಟು ಅವುಗಳನ್ನು ಗ್ರಾಮ ಪಂಚಾಯತ್‌ಗಳಾಗಿ ಘೋಷಿಸುವಂತೆ ಆಗ್ರಹಿಸಿ ನಾವು ಕಳೆದ ಶುಕ್ರವಾರ ಬೈಂದೂರಿನ ತಾಲೂಕು ಕಚೇರಿ ಎದುರಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ದೀಪಕ್‌ಕುಮಾರ್ ಶೆಟ್ಟಿ ತಿಳಿಸಿದರು.
ಬೈಂದೂರು ಸುತ್ತಮುತ್ತ 23 ಕಿ.ಮೀ. ವ್ಯಾಪ್ತಿಯ ಹತ್ತಾರು ಕುಗ್ರಾಮ ಗಳಿದ್ದು, ಕೃಷಿಯೇ ಜನರ ಜೀವನಾಧಾರ ವಾಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಈ ಗ್ರಾಮಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರಿಗೆ ಮೂಲ ಸೌಕರ್ಯಗಳು ದೊರಕುತ್ತಿಲ್ಲ. ಅಕ್ರಮ-ಸಕ್ರಮ, ಕೃಷಿ ಸೌಲಭ್ಯಗಳು ದೊರೆಯದೆ, ಸಣ್ಣ ಕೆಲಸಕ್ಕೂ ನಾವು ಉಡುಪಿಗೆ ಅಲೆಯಬೇಕಾಗಿದೆ. ಈ ಸಮಸ್ಯೆಗೆ ಜಿಲ್ಲಾಡಳಿತ ಇನ್ನೂ ಸ್ಪಂದಿಸಿಲ್ಲ ಎಂದರು.







