ದ್ವಿತೀಯ ಪಿಯುಸಿ ಪರೀಕ್ಷೆ-2: ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಅವಕಾಶ

ಉಡುಪಿ, ಮೇ 22: ಕರ್ನಾಟಕ ಪದವಿ ಪೂರ್ವ ಶಿಕ್ಷಣದ ರಾಜ್ಯಮಟ್ಟದ ಪರೀಕ್ಷಾ ನಿಯಮಾವಳಿ 1997ರ ನಿಯಮ 29 (1) ಹಾಗೂ 30 (1)ರ ಅಡಿ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನ ಕ್ಕಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಿದ್ದು, ಪರೀಕ್ಷೆ-2ಕ್ಕೆ ಹಾಜರಾದ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಛಾಯಾ ಪ್ರತಿಗಳಿಗೆ ಅರ್ಜಿ ಸಲ್ಲಿಸಿ ಛಾಯಾ ಪ್ರತಿ ಪಡೆದ ವಿಷಯಗಳಿಗೆ ಮಾತ್ರ ಮರು ಮೌಲ್ಯಮಾಪನ/ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಷಯಗಳಿಗೆ ಪ್ರತ್ಯೇಕವಾಗಿ ಮರುಎಣಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆನ್‌ಲೈನ್ ನಲ್ಲಿ ಹೊರತುಪಡಿಸಿ ಇನ್ನಾವುದೇ ವಿಧಾನಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ. ನಿಗದಿಯಾಗಿರುವ ಶುಲ್ಕವನ್ನು ಆನ್‌ಲೈನ್ ಮೂಲಕ -KARNATAKA-ONE-PAYMENT GATEWAY- ಮುಖಾಂತರ ಪಾವತಿಸಲು ಅವಕಾಶವಿರುತ್ತದೆ.
ಛಾಯಾ ಪ್ರತಿಗಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ. 530, ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ. 1670 ಶುಲ್ಕ ನಿಗದಿಪಡಿಸಲಾಗಿದೆ. ಅಂಕಗಳ ಮರುಎಣಿಕೆಗಾಗಿ ಯಾವುದೇ ಶುಲ್ಕ ಇರುವುದಿಲ್ಲ.
ಛಾಯಾ ಪ್ರತಿಗಾಗಿ ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನ. ಛಾಯಾ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಮೇ 24ರವರೆಗೆ ಕಾಲಾವಕಾಶವಿದೆ. ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು (ಛಾಯಾ ಪ್ರತಿ ತೆಗೆದುಕೊಂಡವರಿಗೆ ಮಾತ್ರ) ಮೇ 25 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಂಡಲಿಯ ಸಹಾಯವಾಣಿ ಸಂಖ್ಯೆ: 080- 23310075, 23310076ಅನ್ನು ಸಂಪರ್ಕಿಸ ಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪ್ರಕಟಣೆ ತಿಳಿಸಿದೆ.






