ಉಡುಪಿ: ಮುಂದುವರಿದ ಮಳೆ; ಸಿಡಿಲಿನಿಂದ 2 ಮನೆಗೆ ಹಾನಿ

ಉಡುಪಿ, ಜೂ.6: ಜಿಲ್ಲೆಯಲ್ಲಿ ಸಾಧಾರಣ ಮಳೆ ಇಂದೂ ಮುಂದುವರಿದಿದ್ದು, ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಆದರೆ ಮುಂಗಾರು ಪ್ರಾರಂಭದಲ್ಲಿ ಕಾಣಿಸಿಕೊಳ್ಳುವ ಬಿರುಸು ಈ ಬಾರಿ ಕಂಡುಬಂದಿಲ್ಲ. ಮಳೆಯ ಪ್ರಮಾಣವೂ ತೀರಾ ಕಡಿಮೆಯಾಗಿತ್ತು.
ಜಿಲ್ಲೆಯ ವಿವಿದೆಡೆ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದರೆ, ಒಂದು ಮನೆಯ ಮೇಲೆ ಮರ ಬಿದ್ದು ಹಾನಿಗೊಳಗಾಗಿದೆ. ಕುಂದಾಪುರ ತಾಲೂಕಿನ ಕೆಂಚನೂರಿನ ರಾಮ ಮೊಗವೀರ ಹಾಗೂ ನಾರಾಯಣ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಅಪಾರ ಹಾನಿ ಸಂಭವಿಸಿದೆ.
ಹೆಬ್ರಿ ತಾಲೂಕಿನ ಮುದ್ರಾಡಿಯ ಸುಶೀಲ ಶೆಟ್ಟಿಗಾರ್ತಿ ಅವರ ಮನೆ ನಿನ್ನೆಯ ಗಾಳಿ-ಮಳೆಗೆ ಭಾಗಶ: ಹಾನಿ ಗೊಂಡಿದ್ದು, 50,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 20.7ಮಿ.ಮೀ. ಮಳೆಯಾಗಿದೆ. ಇಂದು ಕಾಪುವಿ ನಲ್ಲಿ ಅತ್ಯಧಿಕ ಮಳೆ ಯಾಗಿದ್ದು, ಇಲ್ಲಿ 30.4ಮಿ.ಮೀ. ಮಳೆ ಬಿದ್ದಿದೆ. ಕಾರ್ಕಳದಲ್ಲಿ 28.7, ಉಡುಪಿಯಲ್ಲಿ 26.8, ಕುಂದಾಪುರದಲ್ಲಿ 22.5, ಹೆಬ್ರಿಯಲ್ಲಿ 14.4, ಬೈಂದೂರಿನಲ್ಲಿ 13.4 ಹಾಗೂ ಬ್ರಹ್ಮಾವರದಲ್ಲಿ 9.4ಮಿ.ಮೀ. ಮಳೆ ಬಿದ್ದಿದೆ. ಮೀನುಗಾರರಿಗೆ ಎಚ್ಚರಿಕೆಯೂ ಮುಂದುವರಿಯಲಿದೆ. ಗಂಟೆಗೆ 45ರಿಂದ 55 ಕಿ.ಮೀ. ವೇಗದ ಗಾಳಿಯು ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.






