ಯುಪಿಐ ಎಂಡಿಆರ್ ಶುಲ್ಕದ ವಿರುದ್ಧ ಮೊಬೈಲ್ ಮಾರಾಟಗಾರರ ಪ್ರತಿಭಟನೆ: ಅ.2ಕ್ಕೆ ಯುಪಿಐ ರಹಿತ ದಿನದ ಘೋಷಣೆ

ಉಡುಪಿ, ಸೆ.26: ಅ.15ರಿಂದ ಜಾರಿಗೆ ಬರಲಿರುವ 2,000ರೂ.ಗಿಂತ ಹೆಚ್ಚಿನ ಯುಪಿಐ ವ್ಯಾಪಾರಿ ಪಾವತಿಗಳ ಮೇಲಿನ ಶೇ.0.4 ಮರ್ಚಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕವನ್ನು ವಿರೋಧಿಸಿ ದೇಶದ 1.50 ಲಕ್ಷಕ್ಕೂ ಅಧಿಕ ಸಣ್ಣ ಮೊಬೈಲ್ ಮಾರಾಟಗಾರರನ್ನು ಪ್ರತಿನಿಧಿಸುವ ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಎಐಎಂಆರ್‌ಎ) ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದ್ದು, ಇದರ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ದೇಶಾದ್ಯಂತ ಮೊಬೈಲ್ ಅಂಗಡಿಗಳಲ್ಲಿ ‘ಯುಪಿಐ ರಹಿತ ದಿನ’ವನ್ನು ಆಚರಿಸಲು ಸಂಘ ನಿರ್ಧರಿಸಿದೆ.
ಎಐಎಂಆರ್‌ಎನ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡುಪಿಯ ಬಿ.ಸುಹಾಸ್ ಕಿಣಿ ಅವರು ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಜಾಗತಿಕ ಬಿಡಿಭಾಗ ಗಳ ಬೆಲೆ ಏರಿಕೆಯಿಂದ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಶೇ.70ರಷ್ಟು ಹೆಚ್ಚಾಗಿವೆ. 10ಸಾವಿರಕ್ಕೆ ಸಿಗುತಿದ್ದ 5ಜಿ ಫೋನ್ ಬೆಲೆ ಈಗ 17,000 ಆಗಿದೆ. ಅಂಗಡಿಗಳ ವ್ಯವಹಾರ ಶೇ.40ರಷ್ಟು ಕುಸಿದಿದೆ. ಕೇವಲ ಶೇ.1 ನಿವ್ವಳ ಲಾಭದಲ್ಲಿ ನಡೆಯುವ ಮಾರಾಟಗಾರರಿಗೆ ಶೇ.0.4 ಎಂಡಿಆರ್ ಎಂದರೆ ಗಾಯದ ಮೇಲೆ ಬರೆ ಎಳೆದಂತೆ ಎಂದು ಅವರು ಹೇಳಿದ್ದಾರೆ.
ತಿಂಗಳಿಗೆ ಒಂದು ಲಕ್ಷ ರೂ.ಗಿಂತ ಕಡಿಮೆ ಯುಪಿಐ ಕ್ಯೂಆರ್ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ನೀಡಲಾಗಿದ್ದರೂ, 10,000ರಿಂದ 17,000ರೂ. ಬೆಲೆಯ ಫೋನ್ ಮಾರುವ ಬಹುತೇಕ ಮೊಬೈಲ್ ಅಂಗಡಿಗಳು ಕೆಲವೇ ಮಾರಾಟಗಳಲ್ಲಿ ಈ ಮಿತಿಯನ್ನು ದಾಟುತ್ತವೆ. ಇದರಿಂದ ಈ ವಿನಾಯಿತಿಯಿಂದ ಮೊಬೈಲ್ ಮಾರಾಟಗಾರ ರಿಗೆ ಯಾವುದೇ ಉಪಯೋಗವಿಲ್ಲ ಎಂದವರು ತಿಳಿಸಿದ್ದಾರೆ.
ಸಂಘದ ಬೇಡಿಕೆಗಳು: ಸಣ್ಣ ಹಾಗೂ ಮಧ್ಯಮ ಮಾರಾಟಗಾರರಿಗೆ ಯುಪಿಐ ಎಂಡಿಆರ್ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಬೇಕು. ಯಾವುದೇ ಶುಲ್ಕ ಜಾರಿಗೆ ಮೊದಲು ವ್ಯಾಪಾರಿ ಸಂಘಗಳೊಂದಿಗೆ ಸಮಾಲೋಚನೆ ನಡೆಸಬೇಕೆಂಬುದು ಸಂಘದ ಬೇಡಿಕೆಯಾಗಿದೆ. ಡಿಜಿಟಲ್ ಇಂಡಿಯಾ ಆಶಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಈಗಾಗಲೇ ಕುಸಿದಿರುವ ವ್ಯವಹಾರದ ನಡುವೆ ಈ ಶುಲ್ಕ ಸಣ್ಣ ವ್ಯಾಪಾರಿಗಳ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ. ಹೀಗಾಗಿ ನಮ್ಮ ಬೇಡಿಕೆಗೆ ಸರಕಾರ ತಕ್ಷಣ ಸ್ಪಂದಿಸಬೇಕು ಎಂದು ಸಂಘದ ರಾಜ್ಯ ಅಧ್ಯಕ್ಷ ರವಿಕುಮಾರ್ ಹಾಗೂ ಸುಹಾಸ್ ಕಿಣಿ ನೀಡಿರುವ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಅ.2ಕ್ಕೆ ಸಾಂಕೇತಿಕ ಪ್ರತಿಭಟನೆ
ಸಂಘದ ನೇತೃತ್ವದಲ್ಲಿ ಅ.2ರಂದು ಸಾಂಕೇತಿಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಯಾವುದೇ ಯುಪಿಐ ವಹಿವಾಟು ನಡೆಸುವುದಿಲ್ಲ. ದೇಶಾದ್ಯಂತ ಮೊಬೈಲ್ ಅಂಗಡಿಗಳಲ್ಲಿ ಅಂದು ಯುಪಿಐ ಪಾವತಿ ಸ್ವೀಕರಿಸು ವುದಿಲ್ಲ. ಯುಪಿಐ ಕ್ಯೂಆರ್, ಸೌಂಡ್ ಬಾಕ್ಸ್ ಹಾಗೂ ಸ್ಕ್ಯಾನ್‌ಗಳನ್ನು ಕಪ್ಪು ಬಟ್ಟೆಗಳಿಂದ ಮುಚ್ಚಲಾಗುವುದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.






