ರೆಂಜಾಳದಲ್ಲಿ ಸಿಡಿಲು ಬಡಿದು ಎರಡು ಜಾನುವಾರು ಸಾವು; 2 ಮನೆಗೆ ಹಾನಿ

ಉಡುಪಿ, ನ.7: ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಜಾನುವಾರು ಮೃತಪಟ್ಟರೆ, ಕುಂದಾಪುರ ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ.ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರ ಅಪರಾಹ್ನದ ಬಳಿಕ ಸಿಡಿಲು, ಗುಡುಗು ಸಹಿತ ಮಳೆಯಾಗಿದ್ದು, ರೆಂಜಾಳ ಗ್ರಾಮದ ಪದ್ಮರಾಜ ಶೆಟ್ಟಿ ಎಂಬವರಿಗೆ ಸೇರಿದ ಎರಡು ಜಾನುವಾರುಗಳು ಸಿಡಿಲು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಕಾರ್ಕಳ ತಹಶೀಲ್ದಾರರ ವರದಿ ತಿಳಿಸಿದೆ.
ಅದೇ ರೀತಿ ಕುಂದಾಪುರ ತಾಲೂಕು 74 ಉಳ್ಳೂರು ಗ್ರಾಮದ ಶೇಖರ್ ಶೆಟ್ಟಿ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಳಗಾಗಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ಗ್ರಾಮದ ನಾಗಪ್ಪ ಪೂಜಾರಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಜಿಲ್ಲೆಯ ಕಾರ್ಕಳ (15.8ಮಿ.ಮೀ), ಬ್ರಹ್ಮಾವರ (9.5), ಕುಂದಾಪುರ (8.0), ಹೆಬ್ರಿ (7.3) ಹಾಗೂ ಉಡುಪಿ (5.4) ತಾಲೂಕುಗಳಲ್ಲಿ ಮಳೆಯಾದ ವರದಿ ಬಂದಿದೆ.
Next Story




