ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ: ಫೆ.20ರಿಂದ ರಾಜ್ಯಮಟ್ಟದ ಕಡಲ ಚಾರಣ, ಪ್ರಕೃತಿ ಅಧ್ಯಯನ ಶಿಬಿರ

ಫೈಲ್ ಫೋಟೊ
ಉಡುಪಿ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕದ ಉಡುಪಿ ಜಿಲ್ಲಾ ಸಂಸ್ಥೆಯ ವತಿಯಿಂದ ರೋವರ್ಸ್ ಮತ್ತು ರೇಂಜರ್ಸ್ಗಳ ರಾಜ್ಯಮಟ್ಟದ ಕಡಲ ತೀರದ ಚಾರಣ ಹಾಗೂ ಪ್ರಕೃತಿ ಅಧ್ಯಯನ ಶಿಬಿರ ಫೆ.20ರಿಂದ 23ರವರೆಗೆ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ.
16ರಿಂದ 25 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳಾಗಿರುವ ರಾಜ್ಯದ ಒಟ್ಟು 200 ಮಂದಿ ರೋವರ್ಸ್ ಹಾಗೂ ರೇಂಜರ್ಸ್ಗಳು ನಾಲ್ಕು ದಿನಗಳ ಈ ಚಾರಣ ಶಿಬಿರದಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಕಾರ್ಯದರ್ಶ ಆನಂದ ಅಡಿಗ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದ ಉದ್ಘಾಟನಾ ಸಮಾರಂಭ ನಾಳೆ ಅಪರಾಹ್ನ 3:30ಕ್ಕೆ ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿದೆ. ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ ಡಾ.ಮೋಹನ್ ಆಳ್ವ ಅವರು ಶಿಬಿರವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸುವರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಜಿಪಂನ ಸಿಇಓ ಪ್ರತೀಕ್ ಬಾಯಲ್, ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್, ಶ್ಯಾಮಿಲಿ ಟ್ರಸ್ಟ್ನ ಡಾ.ಜಿ.ಶಂಕರ್ ಮುಂತಾದವರು ಭಾಗವಹಿಸಲಿದ್ದಾರೆ.
ಎರಡನೇ ದಿನದ ಕಾರ್ಯಕ್ರಮ ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್ ಕಡಲತೀರದಿಂದ ಪ್ರಾರಂಭಗೊಳ್ಳಲಿದೆ. ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಚಾರಣಕ್ಕೆ ಚಾಲನೆ ನೀಡಲಿದ್ದಾರೆ. ಕಾಪು ಬೀಚ್ನಲ್ಲಿ ದಿನದ ಚಾರಣ ಕೊನೆಗೊಳ್ಳಲಿದೆ.
ಮೂರನೇ ದಿನದ ಚಾರಣ ಕಾಪು ಬೀಚ್ ಕಡಲತೀರದಿಂದ ಪ್ರಾರಂಭಗೊಳ್ಳಲಿದ್ದು, ಎಡಿಸಿ ಮಮತಾ ದೇವಿ ಜಿ.ಎಸ್. ಇದಕ್ಕೆ ಚಾಲನೆ ನೀಡುವರು. ಮಲ್ಪೆಯ ಗಾಂಧಿ ಶತಾಬ್ದಿ ಶಾಲೆಯಲ್ಲಿ ಇದು ಮುಕ್ತಾಯ ಗೊಳ್ಳಲಿದೆ. ಇಲ್ಲಿ ಸ್ಥಾಪಕರ ದಿನಾಚರಣೆ ನಡೆಯಲಿದ್ದು, ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಇದನ್ನು ಉದ್ಘಾಟಿಸಲಿದ್ದಾರೆ.
ಫೆ.23ರಂದು ನಾಲ್ಕನೇ ದಿನದಲ್ಲಿ ಮಲ್ಪೆ ಸೀ ವಾಕ್ಬಳಿ ಸರ್ವಧರ್ಮ ಪ್ರಾರ್ಥನೆ, ಸೈಂಟ್ ಮೇರೀಸ್ ದೀಪಕ್ಕೆ ಪ್ರಯಾಣ, ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಪರಾಹ್ನ 3:00ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲಾ ದಿನಗಳಲ್ಲೂ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮವೂ ನಡೆಯಲಿದೆ ಎಂದು ಆನಂದ ಅಡಿಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ.ಪೈ, ಜಿಲ್ಲಾ ಸಂಘದ ಉಪಾಧ್ಯಕ್ಷೆ ಗುಣರತ್ನ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಪ್ರಥಮ್ಕುಮಾರ್ ಕೆ.ಎಸ್. ರಾಜ್ಯ ಸಹ ಸ್ಘಟನಾ ಆಯುಕ್ತೆ ಸುಮನ ಶೇಖರ್ ಉಪಸ್ಥಿತರಿದ್ದರು.







