ಮೇ 20ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ| ಉಡುಪಿ ಜಿಲ್ಲೆಯಲ್ಲಿ ಮುಷ್ಕರ ಯಶಸ್ವಿಗೊಳಿಸಲು ಸಿಐಟಿಯು ಕರೆ

ಉಡುಪಿ, ಮೇ 13: ಕೇಂದ್ರ ಸಂಘಟನೆಗಳು ಒಳಗೊಂಡ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮೇ 20ರಂದು ಕರೆ ನೀಡಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಉಡುಪಿ ಜಿಲ್ಲೆಯಲ್ಲಿ ಯಶಸ್ಸುಗೊಳಿಸ ಬೇಕೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಕಾರ್ಯ ದರ್ಶಿ ಕೆ.ಮಹಾಂತೇಶ್, ಸಂಘಟಿತ- ಅಸಂಘಟಿತ ವಲಯದ ಕಾರ್ಮಿಕರ ಪರಿಸ್ಥಿತಿಯನ್ನು ಸಮಸ್ಯೆ ಗಳನ್ನು ಇದಕ್ಕೆ ಕಾರಣವಾಗಿರುವ ಸರಕಾರದ ನೀತಿಗಳನ್ನು ಜನತೆ ಮುಂದಿರಿಸಲು ಮತ್ತು ರೈತರು ಹಾಗೂ ಕಾರ್ಮಿಕರಂಗದ ಸಮಸ್ಯೆಗಳಿಗೆ ಕಾರಣವಾಗಿರುವ ನೀತಿಗಳನ್ನು ಬದಲಾಯಿಸುವಂತೆ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಮುಷ್ಕರ ಮಾಡಲು ಎಲ್ಲ ಸಂಘಗಳಲ್ಲಿ ತಯಾರಿ ನಡೆದಿದ್ದು, ವಿವಿಧ ಹಂತಗಳಲ್ಲಿ ಸಭೆ ನಡೆಸಿ ವಿವರಿಸಲಾಗಿದೆ. ಬ್ಯಾಂಕ್, ವಿಮೆ, ಅಂಚೆ, ಬಿಎಸ್ಸೆನ್ನೆಲ್, ಕಟ್ಟಡ ಕಾರ್ಮಿಕರು, ಬೀಡಿ, ಗೇರುಬೀಜ, ಹೆಂಚು ಮತ್ತು ಇತರೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಆಶಾ ನೌಕರರು ಮುಷ್ಕರದಲ್ಲಿ ಭಾಗವಹಿಸಲಿ ದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆವೆಮಣ್ಣಿನ ಕೊರತೆ, ಮರಳು ಕೊರೆತೆಯಿಂದಾಗಿ ಹೆಂಚು ಮತ್ತು ಕಟ್ಟಡ ಕಾರ್ಮಿಕರ ಮೇಲೆ ಮಾತ್ರವಲ್ಲದೆ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತದೆ. ಈ ಮುಷ್ಕರಕ್ಕೆ ಜಿಲ್ಲೆಯ ಬಸ್ ಮಾಲಕರು, ನೌಕರರು, ರಿಕ್ಷಾ ಚಾಲಕ ಮಾಲಕರು, ಹೊಟೇಲು, ಅಂಗಡಿ ಮಾಲಕರೂ ಬೆಂಬಲ ನೀಡುವಂತೆ ಮನವಿ ಮಾಡಲಾಗುವುದು. ಸಿಐಟಿಯು ಮಾತ್ರವಲ್ಲದೆ ಎಐಟಿಯುಸಿ, ಇಂಟಕ್, ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಮೇ 20ರಂದು ಬೆಳಗ್ಗೆ ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಬೆಳಗ್ಗೆ 11ಗಂಟೆಗೆ ಅಜ್ಜರ ಕಾಡು ಹುತಾತ್ಮ ಸ್ಮಾರಕ ಬಳಿ ಬಹಿರಂಗ ಸಭೆ ನಡೆಯಲಿದೆ. ಕುಂದಾಪುರ ಶಾಸ್ತ್ರೀಯ ಸರ್ಕಲ್‌ನಿಂದ ಬೆಳಗ್ಗೆ 10ಗಂಟೆಗೆ ಮೆರವಣಿಗೆ ಹೊರಟು, ಬಳಿ ಅದೇ ಸ್ಥಳದಲ್ಲಿ ಬಹಿರಂಗ ಸಭೆ ಜರಗಲಿದೆ. ಬೈಂದೂರಿ ನಲ್ಲೂ ಮುಷ್ಕರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿಗಳಾದ ಕವಿರಾಜ್ ಎಸ್. ಕಾಂಚನ್ ಹಾಗೂ ಶೇಖರ ಬಂಗೇರ ಉಪಸ್ಥಿತರಿದ್ದರು.
‘ಕಾರ್ಮಿಕರ ಬದಲು ಮಾಲಕರಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾಯಿದೆಗಳನ್ನು ಬದಲಾಯಿಸಿ ನಾಲ್ಕು ಸಂಹಿತೆಯನ್ನಾಗಿ ಮಾಡಲಾಗಿದೆ. ಇದರಿಂದ ಕಳೆದ 75ವರ್ಷಗಳಿಂದ ಕಾರ್ಮಿಕರು ಪಡೆಯುತ್ತಿದ್ದ ಸೌಲಭ್ಯಗಳು ಮುಂದಿನ ದಿನಗಳ ಮರೀಚಿಕೆಯಾಗಲಿದೆ. ಈ ದೇಶದ ರೈತರು, ಕಾರ್ಮಿಕರು, ಶ್ರಮಿಕ ವರ್ಗವೇ ನಿಜವಾದ ದೇಶಪ್ರೇಮಿಗಳು ಹೊರತು ಪ್ರಧಾನಿ ನರೇಂದ್ರ ಮೋದಿ ಅಲ್ಲ. ದೇಶದ ಪ್ರೇಮದ ಹೆಸರಿನಲ್ಲಿ ಮೋದಿ ಜನರ ಬದುಕು ನಾಶ ಮಾಡಲು ಹೊರಟಿದ್ದಾರೆ’
-ಕೆ.ಮಹಾಂತೇಶ್, ರಾಜ್ಯ ಸಮಿತಿ ಕಾರ್ಯದರ್ಶಿ, ಸಿಐಟಿಯು







