ಉಡುಪಿ: ಮುಂದುವರಿದ ಮಳೆ; 20ಕ್ಕೂ ಅಧಿಕ ಮನೆಗಳಿಗೆ ಹಾನಿ

ಉಡುಪಿ, ಜೂ.24: ಜಿಲ್ಲೆಯಾದ್ಯಂತ ಗಾಳಿ-ಮಳೆಯ ಪ್ರತಾಪ ಮುಂದುವರಿದಿದ್ದು, ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಬೀಸಿದ ಭಾರೀ ಗಾಳಿಗೆ ಜಿಲ್ಲೆಯ ಕುಂದಾಪುರ, ಕಾರ್ಕಳ, ಹೆಬ್ರಿ ತಾಲೂಕುಗಳು 20ಕ್ಕೂ ಅಧಿಕ ಮನೆ ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಇದರಿಂದ ಒಟ್ಟಾರೆಯಾಗಿ ಸುಮಾರು ಐದು ಲಕ್ಷ ರೂ.ಗಳ ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.
ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ದೇವಲ್ಕುಂದ ಗ್ರಾಮದ ಜಾಡಿ ಎಂಬಲ್ಲಿ ಪದ್ದು ಬಿನ್ ಕುಷ್ಟ ಪೂಜಾರಿ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಸಂಪೂರ್ಣ ಹಾನಿಯಾಗಿದೆ. ಇದರಿಂದ ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ ಬೀಸಿದ ಗಾಳಿ-ಮಳೆಗೆ ಸಿದ್ಧಾಪುರ ಗ್ರಾಮದ ಕಡ್ರಿ ಎಂಬಲ್ಲಿ ಶಾಂತರಾಮ್ ಶೆಟ್ಟಿ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಮನೆ ಭಾಗಶ: ಹಾನಿಯಾಗಿದೆ. ಇದರಿಂದ 25,000ರೂ. ಗಳಿಗೂ ಅಧಿಕ ಹಾನಿಯಾಗಿರುವ ಅಂದಾಜು ಮಾಡಲಾಗಿದೆ.
ಉಪ್ಪಿನಕುದ್ರು ಗ್ರಾಮದ ನಾಗಪ್ಪ ಎಂಬವರ ಮನೆಗೆ ತಾಗಿಕೊಂಡಿರುವ ಜಾನುವಾರು ಕೊಟ್ಟಿಗೆ ಗೋಡೆ ಕುಸಿದು ಅಪಾರ ಹಾನಿಯಾಗಿದೆ. ಗುಲ್ವಾಡಿ ಗ್ರಾಮದ ಸೋಮ ಪೂಜಾರಿಯವರ ಮನೆ ಮೇಲೆ ಅಕೆಷಿಯಾ ಮರ ಬಿದ್ದು ಮನೆಯ ಸಿಮೆಂಟ್ ಶೀಟ್ ಹಾಗೂ ಹೆಂಚುಗಳು ಹಾನಿಗೊಂಡಿವೆ. ನೂಜಾಡಿ ಗ್ರಾಮದ ಬಗ್ವಾಡಿಯ ಬಚ್ಚಿ ಮೊಗೇರ್ತಿಯವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 15,000ರೂ.ನಷ್ಟವಾಗಿರುವುದಾಗಿ ಹೇಳಲಾಗಿದೆ.
ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕವಾಡಿಯ ನಂದಿ ಎಂಬವರ ಮನೆ ಮಳೆಯಿಂದ ಸಂಪೂರ್ಣ ಹಾನಿಗೊಂಡಿದೆ. ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಲಕ್ಷ್ಮಣ, ನೂಜಾಡಿಯ ಶಂಕರ ಮೊಗವೀರ, ಗಣಪು ಮೊಗವೀರ, ಗುಜ್ಜಾಡಿ ಗ್ರಾಮದ ನಾಗು ಎಂಬವರ ಮನೆಗಳಿಗೂ ಗಾಳಿ-ಮಳೆಯಿಂದ ಹಾನಿಯಾಗಿರುವ ಮಾಹಿತಿ ಬಂದಿದೆ.
ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಮಹಾಬಲ ನಾಯ್ಕ ಹಾಗೂ ಸಂಜೀವ ನಾಯ್ಕ ಎಂಬವರ ಮನೆಗಳಿಗೆ ಬೀಸಿದ ಗಾಳಿಗೆ ತಲಾ 50,000ಕ್ಕೂ ಅಧಿಕ ಹಾನಿಯಾಗಿದೆ. ಗುಲ್ವಾಡಿ ಗ್ರಾಮದ ಸಾಧು, ಕುಂದಾಪುರದ ರಾಮಜಿ ಮೆಂಡನ್ ಅವರ ಮನೆಗೂ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.
ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಗಂಗಾ ಮೊಗೇರ್ತಿ ಅವರ ಜಾನುವಾರು ಕೊಟ್ಟಿಗೆಗೆ ಹಾನಿ ಯಾಗಿದ್ದರೆ, ಕಾರ್ಕಳ ತಾಲೂಕು ಹಿರ್ಗಾನದ ಸಂತೋಷ ಆಚಾರ್ಯರ ಮನೆ ಮೇಲೆ ಮರ ಬಿದ್ದು, ಹೆಬ್ರಿ ಗ್ರಾಮದ ಚಾರದ ಸತೀಶ್ ಶೆಟ್ಟಿ, ರಾಮದಾಸ ಶೆಟ್ಟಿ ಹಾಗೂ ಬಾಸ್ಕರ ಶೆಟ್ಟಿ ಎಂಬವರ ಮನೆಗಳಿಗೂ ಗಾಳಿ-ಮಳೆಯಿಂದ ಹಾನಿ ಸಂಭವಿಸಿದೆ.
ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 50.8ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 68.8, ಬೈಂದೂರಿನಲ್ಲಿ 59.1, ಕುಂದಾಪುರದಲ್ಲಿ 52 ಮಿ.ಮೀ. ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಬುಧವಾರವೂ ಯೆಲ್ಲೋ ಅಲರ್ಟ್ ಇದ್ದು, ರಾಜ್ಯ ಕರಾವಳಿಯ ಎಲ್ಲಾ ಪ್ರಮುಖ ಬಂದರುಗಳಲ್ಲಿ ಸ್ಥಳೀಯ ಎಚ್ಚರಿಕೆಯ ಸೂಚನೆ 3ನ್ನು ಹಾರಿಸಲು ಹವಾಮಾನ ಇಲಾಖೆ ತಿಳಿಸಿದೆ.