ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ವರ್ಷಕ್ಕೆ 20 ಕೋಟಿ ರೂ. ವ್ಯಯ: ಸಚಿವ ಬೋಸರಾಜು

ಕುಂದಾಪುರ, ಮೇ 12: ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗಾಗಿ ವರ್ಷಕ್ಕೆ ಸರಕಾರದಿಂದ 20 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. 5 ವರ್ಷಕ್ಕೆ ನಿರ್ವಹಣೆಗಾಗಿ ಟೆಂಡರ್ ಕೂಡ ಕರೆದು, ಕೊಡಲಾಗುತ್ತಿದೆ. ಆ ಕಾಮಗಾರಿಗಳ ಸಂಪೂರ್ಣ ಮಾಹಿತಿ ತರಿಸಿ, ಪರಿಶೀಲನೆ ಮಾಡುವ ಮೂಲಕ ಇಲಾಖೆಯಿಂದಲೇ ನಿಗಾವಹಿಸಲಾಗುತ್ತಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.
ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಗೆ ವರ್ಷಕ್ಕೆ 50ಕೋಟಿ ರೂ. ಅಂದರೆ ತಿಂಗಳಿಗೆ 4.16ಕೋಟಿ ರೂ. ಬಿಡುಗಡೆಯಾಗುತ್ತದೆ. ತಡೆಗೋಡೆ ನಿರ್ಮಾಣಕ್ಕೆ ಗರಿಷ್ಠ ಅರ್ಜಿ ಬರುತ್ತಿದೆ. ಎಲ್ಲಿ ಹೆಚ್ಚಿನ ಅವಶ್ಯಕತೆ ಇದೆಯೋ ಅಲ್ಲಿಗೆ ಖಂಡಿತ ಆದ್ಯತೆ ನೆಲೆಯಲ್ಲಿ ಕೊಡುತ್ತೇವೆ. ಕರಾವಳಿ ಭಾಗದ ನದಿ ಕೊರತೆ ತಡೆಗೋಡೆ ನಿರ್ಮಾಣಕ್ಕೂ ಸಾಧ್ಯವಾದಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದರು.
ನದಿಗಳ ಜೋಡಣೆ ಯೋಜನೆ ಬಗ್ಗೆ ಕೇಂದ್ರ ಸರಕಾರವೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇಲಾಖೆಯಿಂದ ಅನೇಕ ಬಾರಿ ಕೇಂದ್ರ ಜಲಶಕ್ತಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಡಿಸಿಎಂ ಡಿಕೆಶಿ ಜತೆಗೂಡಿ ಸ್ವತಃ ನಾನು ಕೇಂದ್ರ ಸಚಿವರನ್ನು ಭೇಟಿಯಾಗಿ 3,200 ಕೋ.ರೂ. ಮೊತ್ತದ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದರೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ ಎಂದವರು ಸ್ಪಷ್ಟಪಡಿಸಿದರು.
ನೀಟ್ - ಯುಜಿ ಪ್ರಶ್ನೆ ಪತ್ರಿಕೆ ಸೋರಿಗೆ ಬಗ್ಗೆ ಪೂರ್ತಿ ಮಾಹಿತಿಯಿಲ್ಲ. ಎಲ್ಲೂ ಯಾವ ಪ್ರಶ್ನೆ ಪತ್ರಿಕೆಗಳೂ ಸೋರಿಕೆ ಯಾಗಬಾರದು ಅನ್ನುವ ಕಟ್ಟುನಿಟ್ಟಿನ ಆದೇಶವಿದೆ. ಈ ಬಗ್ಗೆ ಅನೇಕ ಬಾರಿ ಚರ್ಚೆಯಾಗಿದೆ. ಕಳೆದ ಎಸೆಸೆಲ್ಸಿ ಪರೀಕ್ಷೆಯ ವೇಳೆ ಸೋರಿಕೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಈ ರೀತಿಯ ಸೋರಿಕೆ ಆಗಬಾರದು. ಅಂತವರ ಮೇಲೆ ಮೊದಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಮೊದಲಿದ್ದ ಹಾಗೇ ಸಿಇಟಿ ಜಾರಿಗೆ ರಾಜ್ಯ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳಲಿದೆ. ಈ ವಿಚಾರ ಚರ್ಚೆಯಲ್ಲಿದೆ. ನಾನು ಹೇಳಲು ಬರುವುದಿಲ್ಲ. ಸರಕಾರದ ನಿರ್ಧಾರವೇ ಅಂತಿಮ ಎಂದವರು ತಿಳಿಸಿದರು.






