ಮೇ 20 ರಂದು ಉಡುಪಿ ಜಿಲ್ಲೆಯಾದ್ಯಂತ ಫಾರ್ಮಸಿ ಬಂದ್

ಉಡುಪಿ, ಮೇ 19: ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ನಿರ್ದೇಶನದಂತೆ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘವು ಮೇ 20 ರಂದು ಉಡುಪಿ ಜಿಲ್ಲೆಯಾದ್ಯಂತ ಫಾರ್ಮಸಿಗಳನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ತಿಳಿಸಿದ್ದಾರೆ.
ಮೇ19ರ ರಾತ್ರಿ 12 ಗಂಟೆಯಿಂದ ಮೇ 20 ರಾತ್ರಿ 12 ಗಂಟೆಯ ವರೆಗೆ ಈ ಬಂದ್ ನಡೆಯಲಿದ್ದು, ಉಡುಪಿ ಜಿಲ್ಲಾ ಹೋಲ್‌ಸೇಲ್ ವ್ಯಾಪಾರಸ್ಥರು ಹಾಗೂ ಸರ್ಜಿಕಲ್ ವ್ಯಾಪಾರಸ್ಥರು ತಮ್ಮ ಸಂಸ್ಥೆಗಳನ್ನು ಬಂದು ಮಾಡುವ ಮೂಲಕ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮನವಿ ಸಲ್ಲಿಕೆ: ಈ ಸಂಬಂಧ ಉಡುಪಿ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇದರ ಸಹಾಯಕ ಔಷಧ ನಿಯಂತ್ರಕ ಶಂಕರ ನಾಯಕ ಅವರಿಗೆ ಮಂಗಳವಾರ ಮನವಿಯನ್ನು ಸಲ್ಲಿಸಲಾಯಿತು.
ಇ-ಫಾರ್ಮಸಿಗಳ ನಿಯಂತ್ರಣರಹಿತ ವಿಸ್ತರಣೆ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಅತಿಯಾದ ಡಿಸ್ಕೌಂಟ್ ನೀತಿ ಯನ್ನು ಕೈಬಿಡಬೇಕು. ಕೋವಿಡ್-19 ಅವಧಿಯಲ್ಲಿ ಹೊರಡಿಸಲಾದ ಜಿಎಸ್‌ಆರ್ 220(ಇ) ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್, ಕಾರ್ಯದರ್ಶಿ ಯು.ಸುಬ್ರಹ್ಮಣ್ಯ ರಾವ್, ಕೋಶಾಧಿಕಾರಿ ಗುರುಕೃಪಾ ವಿ. ರಾವ್, ಪ್ರಮುಖರಾದ ರವೀಂದ್ರ ಶೆಟ್ಟಿ, ನಂದಕುಮಾರ್, ಮಂಜುನಾಥ್ ನಾಯಕ್, ಅಶ್ವಿನ್, ರಾಜೇಶ್ ಉಪಸ್ಥಿತರಿದ್ದರು.






