ಉಡುಪಿ ಜಿಲ್ಲೆಯ 200ಕ್ಕೂ ಅಧಿಕ ಕೃಷಿಕರಿಂದ ತಾಳೆ ಬೆಳೆ: ವರ್ಷವಿಡೀ ಇಳುವರಿಯಿಂದ ಲಾಭ

ಉಡುಪಿ, ಆ.31: ಉಡುಪಿ ಜಿಲ್ಲೆಯಲ್ಲಿ ಬಹುತೇಕ ಕೃಷಿಕರು ಹಲವು ವರ್ಷಗಳಿಂದ ತೆಂಗು, ಅಡಿಕೆಯಂತಹ ತೋಟಗಾರಿಕಾ ಬೆಳೆಗಳನ್ನೇ ನಂಬಿ ಬದುಕು ಕಟ್ಟಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಅದರೊಂದಿಗೆ ಜಿಲ್ಲೆಯ ರೈತರು ತಾಳೆ ಕೃಷಿಯತ್ತಲೂ ಒಲವು ತೋರಿಸುತ್ತಿದ್ದಾರೆ. ಈ ಮೂಲಕ ಹಲವು ಕೃಷಿಕರು ಯಶಸ್ವಿ ಕೂಡ ಆಗಿದ್ದಾರೆ.
ಭಾರತೀಯ ಅಡುಗೆ ಮನೆಗಳಲ್ಲಿ ಅನೇಕ ವರ್ಷಗಳಿಂದ ತಾಳೆ ಎಣ್ಣೆ ಸ್ಥಾನ ಪಡೆದುಕೊಂಡಿದೆ. ಇದರಿಂದ ತಾಳೆ ಎಣ್ಣೆಗೆ ಬಹಳಷ್ಟು ಬೇಡಿಕೆ ಕೂಡ ಇದೆ. ಇದು ಯಾವತ್ತೂ ಕುಸಿಯಲ್ಲ ಎಂಬ ನಂಬಿಕೆಯಿಂದ ರೈತರು ಇದರತ್ತ ಮುಖ ಮಾಡುತ್ತಿದ್ದಾರೆ. ಈ ಎಣ್ಣೆ ವಿವಿಧ ಉತ್ಪನ್ನ ತಯಾರಿಗೂ ಬಳಕೆಯಾಗುತ್ತಿದೆ.
ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ತಾಳೆ ಕೃಷಿ ಮಾಡುವವರ ಸಂಖ್ಯೆ ಸಾಕಷ್ಟು ವಿರಳವಾಗಿತ್ತು. ಬಹು ಬೆಳೆ ಪದ್ಧತಿ ಯನ್ನು ಅನುಸರಿಸಿರುವ ಹಲವು ರೈತರು ತಾಳೆ ಕೃಷಿಯತ್ತ ಮುಖ ಮಾಡಿ ಯಶಸ್ಸು ಸಾಧಿಸಿರುವುದರಿಂದ ಇಂದು ಉಡುಪಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ರೈತರು ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಭತ್ತ, ಅಡಿಕೆ ತೋಟದ ಕೆಲಸಕ್ಕೆ ಕಾರ್ಮಿಕರ ಕೊರತೆಯ ಬಹಳ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಕಡಿಮೆ ನಿರ್ವಹಣೆಯ ತಾಳೆ ಬೆಳೆ ಲಾಭದಾಯಕ ಆಗುತ್ತಿದೆ. ಆದುದರಿಂದ ಈ ಬೆಳೆಯ ಬಗ್ಗೆ ಜಿಲ್ಲೆಯ ರೈತರಿಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.
‘ಕಳೆದ 12 ವರ್ಷಗಳಿಂದ ತಾಳೆ ಕೃಷಿ ಮಾಡುತ್ತಿದ್ದೇನೆ. ಸದ್ಯ 5 ಎಕರೆ ಪ್ರದೇಶದಲ್ಲಿ 300 ತಾಳೆ ಗಿಡಗಳನ್ನು ಬೆಳೆಸಿದ್ದೇನೆ. ಇದರಿಂದ ಕಳೆದ ವರ್ಷ 400 ಟನ್ ಇಳುವರಿ ಬಂದಿದೆ. ಒಂದು ವರ್ಷದಲ್ಲಿ 21 ಕೊಯ್ಲು ಮಾಡ ಬಹುದು. ಇದು ತೆಂಗು ಕೃಷಿಗಿಂತ ಹೆಚ್ಚು ಲಾಭದಾಯವಾಗಿದೆ’ ಎಂದು ತಾಳೆ ಕೃಷಿಕ ದಯಾನಂದ ಹೆಗ್ಡೆ ತಿಳಿಸಿದ್ದಾರೆ.
ತಾಳೆ ಕೃಷಿ ಯೋಜನೆ: ತೋಟಗಾರಿಕಾ ಇಲಾಖೆ, ಖಾಸಗಿ ಕಂಪನಿ ಹಾಗೂ ರೈತರ ಸಹಭಾಗಿತ್ವದಲ್ಲಿ ತಾಳೆ ಕೃಷಿ ಯೋಜನೆಯನ್ನು ರೂಪಿಸಲಾಗಿದ್ದು, ಸದ್ಯ 3 ಎಫ್ ಆಯಿಲ್ ಪಾಮ್ ಕಂಪನಿಯ ಸಹಕಾರದಲ್ಲಿ ಜಿಲ್ಲೆಯ ರೈತರು ಈ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೊಸದಾಗಿ ತಾಳೆ ಕೃಷಿ ಮಾಡುವವರಿಗೆ ತೋಟ ನಿರ್ಮಾಣ ಮಾಡಲು ಬೇಕಾದ ತಾಳೆ ಸಸಿಗಳನ್ನು ಅನುಮೋದಿತ ಸಂಸ್ಥೆಯ ಮೂಲಕ ತೋಟಗಾರಿಕಾ ಇಲಾಖೆಯು ಸರಬರಾಜು ಮಾಡುತ್ತಿದೆ. ಈ ತೋಟದಲ್ಲಿ ತಾಳೆ ನಾಟಿ ಮತ್ತು ನಿರ್ವಹಣೆ ಮಾಡಲು ಕೂಡ ತೋಟಗಾರಿಕಾ ಇಲಾಖೆಯಿಂದ ಸಹಾಯಧನ ಒದಗಿಸಲಾಗುತ್ತಿದೆ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.
ತಾಳೆ ತೋಟ ನಿರ್ಮಾಣ ಮಾಡಿದ ನಾಲ್ಕು ವರ್ಷಗಳ ನಂತರ ಅದಕ್ಕೆ ನೀರು ಪೂರೈಕೆಗೆ ಅನುಕೂಲವಾಗುವ ಕೊಳವೆ ಬಾವಿ ನಿರ್ಮಾಣಕ್ಕೂ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ತಾಳೆ ಬೆಳೆ ಪ್ರದೇಶ ವಿಸ್ತರಣೆಗಾಗಿ ರೈತರಿಗೆ ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ, ಡಿಸೇಲ್ ಪಂಪ್‌ಸೆಟ್‌ಗಳಿಗೂ ಸಹಾಯಕಧನ ಒದಗಿಸಲಾಗುತ್ತದೆ ಎಂದು ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ತಿಳಿಸಿದ್ದಾರೆ.
‘ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮಾದರಿಯ ಯೋಜನೆ ಇದಾಗಿದ್ದು, ಇದರಿಂದ ನಾವು ಬೆಳೆದ ತಾಳೆ ಹಣ್ಣುಗಳನ್ನು ಕಂಪನಿಯವರೇ ಬಂದು ಖರೀದಿಸುತ್ತಿದ್ದಾರೆ. ಆದುದರಿಂದ ಇದಕ್ಕೆ ಯಾವುದೇ ಮಾರುಕಟ್ಟೆ ಸಮಸ್ಯೆ ಎದುರಾಗುವುದಿಲ್ಲ. ಇದರೊಂದಿಗೆ ತಾಳೆ ತೋಟದಲ್ಲಿ ಐದು ವರ್ಷಗಳ ಕಾಲ ಶುಂಠಿ, ಅನನಾಸು ಮೊದಲಾದವು ಗಳನ್ನೂ ಬೆಳೆಯುವ ಮೂಲಕ ಹೆಚ್ಚು ಲಾಭ ಪಡೆಯಬಹುದಾಗಿದೆ’ ಎಂದು ಕಾರ್ಕಳ ಕಕ್ಕುಂಜೆಯ ಕೃಷಿಕ ದಯಾನಂದ ಹೆಗ್ಡೆ ತಿಳಿಸಿದ್ದಾರೆ.
228.91 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಕೃಷಿ
ಉಡುಪಿ ಜಿಲ್ಲೆಯಲ್ಲಿ ಒಟ್ಟು 210 ರೈತರು ತಾಳೆ ಕೃಷಿ ಮಾಡುತ್ತಿದ್ದು, ಉಡುಪಿ ತಾಲೂಕಿನಲ್ಲಿ 38 ಮಂದಿ, ಕಾರ್ಕಳ ತಾಲೂಕಿನಲ್ಲಿ 71 ರೈತರು ಹಾಗೂ ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 101 ಕೃಷಿಕರು ಈ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 228.91 ಹೆಕ್ಟೇರ್ ಜಾಗದಲ್ಲಿ ತಾಳೆಯನ್ನು ಬೆಳೆಯಲಾಗುತ್ತದೆ. ಉಡುಪಿ ತಾಲೂಕಿನಲ್ಲಿ 41.95 ಹೆಕ್ಟೇರ್, ಕುಂದಾಪುರ ತಾಲೂಕಿನಲ್ಲಿ 68.58 ಹೆಕ್ಟೇರ್ ಹಾಗೂ ಕುಂದಾಪುರ ತಾಲೂಕಿನಲ್ಲಿ 118.38 ಹೇಕ್ಟೇರ್ ಜಾಗದಲ್ಲಿ ತಾಳೆ ಕೃಷಿ ಮಾಡಲಾಗುತ್ತಿದೆ.
ಅಡಿಕೆ, ತೆಂಗಿನ ಕೃಷಿಗೆ ಬೇಕಾದಷ್ಟೇ ನೀರು ತಾಳೆ ಬೆಳೆಗೂ ಬೇಕಾಗುತ್ತದೆ. ಈ ಬೆಳೆಗೆ ಅಡಿಕೆ, ತೆಂಗಿಗೆ ಬರುವಂತಹ ರೋಗಗಳು ಬಾಧಿಸುವುದಿಲ್ಲ. ಕಳೆದ ವರ್ಷ ಸರಕಾರವು ತಾಳೆ ಬೆಳೆಗೆ 12.50ರೂ. ಬೆಂಬಲ ಬೆಲೆ ಘೋಷಿಸಿತ್ತು. ಈ ವರ್ಷ 17.50ರೂ. ಘೋಷಿಸಿದೆ. ಈ ಬೆಳೆಗೆ ಕಾರ್ಮಿಕರ ಅಗತ್ಯ ಇಲ್ಲದೆ ಇರುವುದರಿಂದ ರೈತರು ಇದರತ್ತ ಆಸಕ್ತಿ ತೋರಿಸಬಹುದು’
-ಮಹೇಶ್ ಭಟ್, ತಾಳೆ ಕೃಷಿಕ, ಎಡಮೊಗೆ, ಕುಂದಾಪುರ







