ಯಶ್ಪಾಲರೇ, ಬ್ರಾಂಡ್ ಉಡುಪಿ ಘನತೆಗೆ 2004ರಲ್ಲೇ ದಕ್ಕೆ ಆಗಿದೆ: ಶ್ಯಾಮರಾಜ್ ಬಿರ್ತಿ

ಶ್ಯಾಮರಾಜ್ ಬಿರ್ತಿ
ಉಡುಪಿ, ಜೂ.14: ಅಂದು 2004ರಲ್ಲೇ ಆದಿಉಡುಪಿಯಲ್ಲಿ ದನ ಕದ್ದರೆಂಬ ಕ್ಷುಲ್ಲಕ ಕಾರಣ ನೀಡಿ ಹಾಜಬ್ಬ ಮತ್ತು ಹಸನಬ್ಬರನ್ನು ಬೆತ್ತಲೆ ಗೊಳಿಸಿ ಥಳಿಸಿದಾಗಲೇ ಬ್ರಾಂಡ್ ಉಡುಪಿಯ ಘನತೆಗೆ ಧಕ್ಕೆ ಆಗಿದೆ. ಅನಂತರ ಸರಣಿ ಕೋಮುವಾದಿ ಘಟನೆಗಳು ಉಡುಪಿಯ ಘನತೆಯನ್ನು ಹರಾಜು ಹಾಕಿದ್ದಾವೆ ಸರಿಪಡಿಸಲಾಗದ ಧಕ್ಕೆಯನ್ನುಂಟು ಮಾಡಿದ್ದಾವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊಸದಾಗಿ ರಚಿಸಿದ ವಿಶೇಷ ಕಾರ್ಯಪಡೆಯ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನೂ ಸೇರ್ಪಡೆಗೊಳಿಸುವ ನಿರ್ಧಾರವನ್ನು ಟೀಕಿಸಿ ಉಡುಪಿ ಶಾಸಕ ಯಶಪಾಲ್ ಸುವರ್ಣ ನೀಡಿದ ಪತ್ರಿಕಾ ಹೇಳಿಕೆಗೆ ಅವರು ಪ್ರತಿಕ್ರಿಯಿಸುತಿದ್ದರು.
ಕೊಕ್ಕರ್ಣೆ ಪಾದೇಮಠದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತ ಪ್ರವೀಣ ಪೂಜಾರಿಯನ್ನು ಟೆಂಪೋದಲ್ಲಿ ದನಗಳನ್ನು ಬಾಡಿಗೆ ಮಾಡುವಾಗ ನಿಮ್ಮದೇ ಪಕ್ಷದ ಕಾರ್ಯಕರ್ತರು ಹೊಡೆದು ಕೊಂದರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ, ಒಂದು ಧರ್ಮದ ಸಂಪ್ರದಾಯ, ಆಚರಣೆಗೆ ಅಡ್ಡಿಪಡಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಹಾಗಿಲ್ಲಾ ಎಂದು ಹುಯಿಲೆಬ್ಬಿಸಿ ಇಡೀ ವಿಶ್ವದಲ್ಲೇ ಉಡುಪಿ ತಲೆ ತಗ್ಗಿಸುವಂತೆ ಮಾಡೀ, ಆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕೊಳ್ಳಿ ಇಟ್ಟೀರಲ್ಲಾ ......ಆಗ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ...... ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಮೀನು ಕದ್ದರೆಂಬ ಸಣ್ಣ ಕಾರಣಕ್ಕೆ ಒಬ್ಬ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ವಿಡಿಯೋ ಮಾಡುತ್ತಾ ಹೊಡೆದರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಬರಲಿಲ್ಲವೇ.......ಅದೂ ಇರಲೀ ಒಬ್ಬ ಜನಪ್ರತಿನಿಧಿಯಾಗಿ ಅದೇ ಹಲ್ಲೆಗೊಳಗಾದ ಮಹಿಳೆಯನ್ನು ಕೇಸ್ ವಾಪಾಸು ಪಡೆಯುವಂತೆ ಒತ್ತಾಯಿಸಿ ಇಡೀ ಸಮುದಾಯವನ್ನೇ ಎತ್ತಿಕಟ್ಟಿ ಉಡುಪಿ ಜಿಲ್ಲಾಧಿಕಾರಿಯವರ ಕಛೇರಿ ಎದುರು ಮೆರವಣಿಗೆ ನಡೆಸಿ ಸಂತ್ರಸ್ತ ಮಹಿಳೆಯಿಂದಲೇ ಕೇಸು ವಾಪಾಸು ಪಡೆಯುವ ಮನವಿ ಕೊಡಿಸಿದಿರಲ್ಲಾ ಆಗ ಅಷ್ಟಮಠಗಳ ತವರೂರಾದ, ಕನಕದಾಸರ ಭಕ್ತಿಗೆ ಮೆಚ್ಚಿ ತಿರುಗಿ ನಿಂತ ಕೃಷ್ಣ ನೆಲೆನಿಂತಿರುವ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ ಈಗ ಹೇಳಿ ಉಡುಪಿಯ ಘನತೆಗೆ ಧಕ್ಕೆ ತಂದವರು ಯಾರು? ಎಂದು ಶ್ಯಾಮರಾಜ್ ಬಿರ್ತಿ ಶಾಸಕರನ್ನು ಪ್ರಶ್ನಿಸಿದ್ದಾರೆ.







