ವಕ್ಫ್ ತಿದ್ದುಪಡಿ ಕಾಯಿದೆ -2025 ಕುರಿತು ವಿಚಾರ ಸಂಕಿರಣ

ಕಾರ್ಕಳ, ಎ.16: ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲ ಧರ್ಮದವರು ಸಹಬಾಳ್ವೆಯಿಂದ ಬದುಕುತ್ತಿದ್ದು, ಇದನ್ನು ಕೇಂದ್ರ ಸರಕಾರ ಸಹಿಸದೆ ಅಡ್ಡಿಪಡಿಸುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆೆ ಆರೋಪಿಸಿದ್ದಾರೆ.
ಕಾರ್ಕಳ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕಾರ್ಕಳ ಜಾಮಿಯ ಮಸೀದಿ ಸಭಾ ಭವನದಲ್ಲಿ ಆಯೋಜಿಸಲಾದ ವಕ್ಫ್ ತಿದ್ದುಪಡಿ ಕಾಯ್ದೆ 2025 ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಿಮ್ಮನ್ನು ಜಾಗೃತಗೊಳಿಸಲು ಈ ವಿಚಾರ ಸಂಕಿರಣ ಅಗತ್ಯವಾಗಿದೆ. ಸಂವಿಧಾನದ 25, 26ರ ಅಡಿಯಲ್ಲಿ ಇದರ ಬಗ್ಗೆೆ ಹೆಚ್ಚಿನ ಮಾಹಿತಿಯನ್ನು ಪಡೆಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಅನೀಸ್ ಪಾಷಾ ಮಾತನಾಡಿ, ಮುಸ್ಲಿಂ ಸಮುದಾಯದ ಆಸ್ತಿ ಕಬಳಿಸುವ ಯತ್ನ ಇದಾಗಿದೆ. ಕೇಂದ್ರ ಸರಕಾರವು ಮುಸ್ಲಿಂ ಸಮುದಾಯದ ಐಕ್ಯತೆ ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಕಾರ್ಕಳ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಗೌಸ್, ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ, ಪ್ರಮುಖರಾದ ನಾಸೀರ್ ಬೈಲೂರು ಉಪಸ್ಥಿತರಿದ್ದರು. ಯಾಸೀನ್ ಕೊಡಿಬೆಂಗ್ರೆೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಪಾಕ್ ಅಹಮ್ಮದ್ ಸ್ವಾಗತಿಸಿದರು.