ಬಿಜೆಪಿ ಸೋಲಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಪ್ರಸಾದ್‌ರಾಜ್ ಕಾಂಚನ್

ಉಡುಪಿ, ಅ.27: ಉಡುಪಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ವೋಟ್ ಚೋರ್ ಗದ್ದಿ ಚೋಡ್ ಅಭಿಯಾನವನ್ನು ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಬಿಜೆಪಿ ಮತಗಳ್ಳ ತನ ನಡೆಸಿ ದೇಶದ ಜನತೆಗೆ ವಂಚನೆ ಎಸಗುತ್ತಿದೆ. ವೋಟ್ ಚೋರ್ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಮೂಲಕ ಜನರಿಗೆ ಮೋಸ ಮಾಡಿರುವ ಬಿಜೆಪಿಯನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗ ಲಿದೆ ಎಂದರು.
ಕಳೆದ ಬಾರಿ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಿಯೇ ಬಿಜೆಪಿ ಗೆದ್ದಿದೆ. ಶೇ.10 ಹೆಚ್ಚುವರಿ ಮತ ಚಲಾವಣೆಯಾಗಿದೆ. ಈ ರೀತಿಯಲ್ಲಿ ಬೆಳವಣಿಗೆ ಈ ಹಿಂದಿನ ಯಾವ ಚುನಾವಣೆಯಲ್ಲೂ ಇರಲಿಲ್ಲ. ಇದು ವೋಟ್ ಚೋರ್‌ಗೆ ಪುಷ್ಟಿ ನೀಡುತ್ತದೆ ಎಂದು ಅವರು ಆರೋಪಿಸಿದರು.
ಈ ಅಭಿಯಾನಕ್ಕೆ ಪಕ್ಷಭೇದ ಮರೆತು ಎಲ್ಲರು ಬೆಂಬಲ ನೀಡಬೇಕಾಗಿದೆ. ಯಾಕೆಂದರೆ ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಗಿರುವ ದ್ರೋಹ ಅಲ್ಲ, ಇಡೀ ಮತದಾರರಿಗೆ ಮಾಡಿರುವ ಮೋಸ ಎಂದು ಅವರು ತಿಳಿಸಿದರು.
ಕೆಪಿಸಿಸಿ ಮುಖಂಡರಾದ ವೆರೆನಿಕಾ ಕರ್ನೇಲಿಯೋ ಮಾತನಾಡಿ, ಮಹಾರಾಷ್ಟ್ರ ಸಹಿತ ಕರ್ನಾಟಕದಲ್ಲೂ ವೋಟ್ ಚೋರ್ ನಡೆದಿದೆ. ಒಂದೇ ಡೋರ್ ನಂಬರ್‌ನಲ್ಲಿ 60, 70 ಮಂದಿ ಮತದಾರರನ್ನು ಸೇರಿಸಿಕೊಳ್ಳಲಾಗಿದೆ. ಬಿಜೆಪಿಯ ಈ ದುಷ್ಕೃತ್ಯದ ಬಗ್ಗೆ ಮಾತನಾಡದೇ ಹೋದರೆ ದೇಶ ಅಧೋಗತಿಗೆ ಹೋಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಕಾಂಗ್ರೆಸ್ ಮುಖಂಡರಾದ ಭುಜಂಗ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಡಾ.ಸುನೀತಾ ಶೆಟ್ಟಿ, ಬಿ.ಕುಶಲ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ, ಸೌರಬ್ ಬಲ್ಲಾಳ್, ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.







