ಉಡುಪಿ: ಡಿ.22ರಂದು ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ

ಉಡುಪಿ, ಡಿ.20: ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ ಡಿ.22ರ ಸೋಮವಾರ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಉಪನಿರ್ದೇಶಕ ಮಾರುತಿ ಅವರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಾರುತಿ ಅವರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಕಟಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನ ಈ ಕುಸ್ತಿ ಪಂದ್ಯಾಟ ನಡೆಯಲಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 400 ಮಂದಿ ಬೆಲ್ಟ್ ಕುಸ್ತಿ ಪಟು ಬಾಲಕ, ಬಾಲಕಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷದಿಂದ ಬೆಲ್ಟ್ ಕುಸ್ತಿ ಪಂದ್ಯಾಟ ರಾಜ್ಯಮಟ್ಟದಲ್ಲಿ ಪ್ರಾರಂಭಗೊಂಡಿದ್ದು, ಕೊಪ್ಪಳದ ಬಳಿಕ ಇದೀಗ ಉಡುಪಿಯಲ್ಲಿ ಇದು ಆಯೋಜನೆಗೊಳ್ಳುತ್ತಿದೆ ಎಂದರು.
ಬಾಲಕಿಯರಲ್ಲಿ ಆರು ವಿಭಾಗಗಳಲ್ಲಿ ಹಾಗೂ ಬಾಲಕರಲ್ಲಿ ಎಂಟು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಪ್ರತಿ ವಿಭಾಗದಲ್ಲಿ ತಲಾ ಒಬ್ಬ ಬಾಲಕ-ಬಾಲಕಿಯರು ಭಾಗವಹಿಸಲು ಅವಕಾಶವಿದೆ. ಉಡುಪಿ ಜಿಲ್ಲೆಯಿಂದ ನಾಲ್ವರು ಬಾಲಕಿಯರು ಹಾಗೂ ಆರು ಮಂದಿ ಬಾಲಕರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ಎಂದರು.
ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರ ಉಪಸ್ಥಿತಿಯಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಎಸ್. ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿರುವರು ಎಂದರು.
ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಸಂಜೆ 5 ಗಂಟೆಗೆ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಡಿಡಿಪಿಯು ಮಾರುತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್, ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹರಿಪ್ರಸಾದ್, ಶಾಲಾ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಎ., ಜಿಲ್ಲಾ ದೈಹಿಕ ಶಿಕ್ಷಣ ಉಪರನ್ಯಾಸಕರ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ ಹಾಗೂ ನಿಟ್ಟೆಯ ದೈಹಿಕ ಶಿಕ್ಷಣ ಉಪನ್ಯಾಸಕ ಶರತ್ ರಾವ್ ಉಪಸ್ಥಿತರಿದ್ದರು.







