ನಿಟ್ಟೆ ಹಲಸು ಸಂಸ್ಕರಣಾ ಘಟಕ ನಿಷ್ಪ್ರಯೋಜಕ ಸ್ಥಿತಿಗೆ: ನೇಮಿರಾಜ್ ಆರೋಪ

ಕಾರ್ಕಳ, ಅ.13: ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕೊಡುವುದಾಗಿ ಹೇಳಿ, ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಸ್ಥಾಪಿಸಲಾದ ಹಲಸು ಸಂಸ್ಕರಣಾ ಘಟಕವು ಇದೀಗ ನಿಷ್ಪ್ರಯೋಜಕ ಸ್ಥಿತಿಗೆ ತಲುಪಿದೆ. ಫ್ಯಾಕ್ಟರಿ ಕೇವಲ ನಾಮಕಾವಸ್ಥೆಯಲ್ಲಿ ಮುಂದುವರೆದಿದ್ದು. ಕೇಂದ್ರ ಸರಕಾರದ ಸಬ್ಸಿಡಿ ಹಣ ಪಡೆಯುವಲ್ಲಿ ಮಾತ್ರಕ್ಕೆ ಸೀಮಿತವಾಗಿರುವುದು ನಿಟ್ಟೆ ಗ್ರಾಮದ ಜನತೆಗೆ ತುಂಬಾ ನಿರಾಶೆಯನ್ನು ನೀಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಎಂಎಸ್‌ಎಂಇ(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಯೋಜನೆ) ಸ್ಟೀಮ್‌ನ್ನು ಎಐಸಿ(ಅಟಲ್ ನವೋದ್ಯಮ ಘೋಷಣಾ ಕೇಂದ್ರ) ಅನುಷ್ಟಾನ ಮಾಡಲಾಗುತ್ತಿದ್ದು, ಸರಕಾರದಿಂದ ನೋಂದಾಯಿಸಲ್ಪಟ್ಟ ಕ್ಲಸ್ಟರ್ ಬೇಸ್ಟ್ ಬ್ಯುಸಿನೆಸ್ ಆರ್ಗನೈನೇಷನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಇದೇ ಸ್ಟೀಂನಡಿಯಲ್ಲಿ ಈ ಹಲಸು ಸಂಸ್ಕರಣಾ ಘಟಕವನ್ನು ತೆರೆಯಲಾಗಿದೆ. ಅದಕ್ಕಾಗಿ ಪ್ರತ್ಯೇಕ ಸುಫಲ ಫಾರ್ಮರ್ಸ್ ಪ್ರೊಡ್ಯುಸರ್ ಕಂಪೆನಿಯನ್ನು ನಿಟ್ಟೆಯಲ್ಲಿ ಆರಂಭಿಸಲಾಗಿದೆ ಎಂದರು.
2020ರಲ್ಲಿ ಈ ಘಟಕ ಮಂಜೂರಾಗಿದ್ದು, 2024ರಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿತು. ಅದರಲ್ಲಿ ಪ್ರಸ್ತುತ 750 ಸದಸ್ಯರಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದು, 1000 ಗ್ರಾಮೀಣ ಮಹಿಳೆಯರು ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದರು. ದಿನಕ್ಕೆ 6000 ಟನ್ ಹಲಸು ವಿಲೇವಾರಿ ಸಾಮರ್ಥ್ಯದ ಈ ಘಟಕ, ಈಗ ದಿನಕ್ಕೆ 600 ಟನ್ ಹಲಸು ಬಳಸಿಕೊಂಡು ವಿವಿಧ ಉತ್ಪನ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಇದು ಅತ್ಯಂತ ಭರವಸೆಯ ಉದ್ಯಮ ಎಂದು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಶಾಸಕರು ಉದ್ಘಾಟನೆಯ ದಿನ ಹಲಸನ್ನು ರಾಜ್ಯ ಬೆಳೆಯನ್ನಾಗಿ ಮಾಡುವ ಮಾತು ಕೊಟ್ಟಿದ್ದರು. ಉಡುಪಿ ಜಿಲ್ಲೆಯ ಒಟ್ಟು 4 ಲಕ್ಷ ರೈತರಿಗೆ ಈ ಯೋಜನೆಯಿಂದ ಪ್ರಯೋಜನವಾಗುತ್ತಿರುವ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಈಗ ನಮಗೆ ಈ ಸಂಸ್ಥೆ ಕೇವಲ ಸರಕಾರದ ಸಬ್ಸಿಡಿ ದೋಚುವ ಪ್ರಯತ್ನಕ್ಕಾಗಿ ಹುಟ್ಟಿಕೊಂಡಿದೆಯೇ ಎಂಬ ಅನುಮಾನಗಳು ಕಾಡುತ್ತಿದೆ ಎಂದು ಅವರು ಆರೋಪಿಸಿದರು.
ಒಬ್ಬ ಮ್ಯಾನೇಜಿಂಗ್ ಡೈರೆಕ್ಟರ್, ಏಳು ಜನ ನಿರ್ದೇಶಕು, 750 ಆರ್‌ಟಿಸಿ ಹೊಂದಿರುವ ಸದಸ್ಯ(ಕೃಷಿಕರು)ರು ಹಾಗೂ ಜಿಲ್ಲೆಯ 4 ಲಕ್ಷ ರೈತರಿಗೆ ಪ್ರಯೋಜನವಾಗುವ ಈ ಕಂಪನಿಯ ಉತ್ಪಾದಿಸುವ ಬೇರೆ ಬೇರೆ ಉತ್ಪನ್ನಗಳು ವಿದೇಶಕ್ಕೂ ರಫ್ತಾಗುತ್ತಿದೆ ಎಂಬ ಆಸೆ ತೋರಿಸಲಾಗಿದೆ. ಆದರೆ ಈ ಘಟಕ ಈಗ ಹೆಸರಿಗಾಗಿ ಮಾತ್ರ ಸೀಮಿತ ವಾಗಿದೆ. ನಿಟ್ಟೆಯಂತಹ ಸುಸಂಸ್ಕೃತರ ಊರಲ್ಲಿ ಈ ರೀತಿ ಮೋಸ ಮಾಡಿ, ಸರಕಾರದ ಸಬ್ಸಿಡಿ ಹಣ ತಿಂದು ಹಾಕಿ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಹೆಸರಿನಲ್ಲಿ ವಂಚಿಸಿ ಈಗ ಮುಚ್ಚುವ ಸ್ಥಿತಿಯಲ್ಲಿರುವುದು ಅತ್ಯಂತ ನೋವು ತಂದಿದೆ ಎಂದರು.
ಈ ಘಟಕಕ್ಕಾಗಿ ಒಟ್ಟು 5,70,92,000ರೂ.(ಕೇಂದ್ರ ಸರಕಾರದಿಂದ 5 ಕೋಟಿ ಹಾಗೂ ನೀತಿ ಆಯೋಗದಿಂದ 70 ಲಕ್ಷ ರೂ. ಸೇರಿದಂತೆ) ಪಡೆದ ಅನುದಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ಇದರ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯರಾದ ಆನಂದ್ ಜೋಸೇಫ್, ಶೋಭಾ ಕುಲಾಲ್, ಕೋಲ್ವಿನ್ ಒಫಿಲಿಯಾ ಡಿಸೋಜ ಉಪಸ್ಥಿತರಿದ್ದರು.






