ತಿಮರೋಡಿಗೆ ನ್ಯಾಯಾಂಗ ಬಂಧನ; ಆ.23ಕ್ಕೆ ಜಾಮೀನು ಅರ್ಜಿ ವಿಚಾರಣೆ

ಉಡುಪಿ, ಆ.21: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಬ್ರಹ್ಮಾವರ ಪೊಲೀಸರಿಂದ ಬಂಧಿತರಾದ ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಬ್ರಹ್ಮಾವರ ಸಂಚಾರಿ ಪೀಠದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಧೀಶರಾದ ನಾಗೇಶ್ ಎನ್.ಎ ತಿರಸ್ಕರಿಸಿದ್ದಾರೆ.
ಆರೋಪಿ ತಿಮರೋಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ನ್ಯಾಯಾಧೀಶರು ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಆ.23ರ ಶನಿವಾರಕ್ಕೆ ನಿಗದಿ ಪಡಿಸಿದ್ದಾರೆ. ಪೊಲೀಸರು ತಿಮರೋಡಿ ಅವರನ್ನು ಹಿರಿಯಡಕ ಜೈಲಿಗೆ ಕರೆದೊಯ್ದಿದ್ದಾರೆ.
ಇಂದು ಸಂಜೆ ಬ್ರಹ್ಮಾವರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಆರೋಪಿ ಪರ ವಕೀಲ ವಿಜಯ್ ವಾಸು ಪೂಜಾರಿ, ತನ್ನ ಕಕ್ಷಿದಾರ ಕಾನೂನಿಗೆ ಗೌರವ ನೀಡಿ ಬೆಳ್ತಂಗಡಿಯಿಂದ ವಿಚಾರಣೆಗೆಂದು ಬ್ರಹ್ಮಾವರ ಪೋಲಿಸ್ ಠಾಣೆಗೆ, ಅವರದ್ದೇ ಖಾಸಗಿ ವಾಹನದಲ್ಲಿ ಆಗಮಿಸಿ ಹಾಜರಾಗಿದ್ದಾರೆ. ಈ ವೇಳೆ ಅವರನ್ನು ಬಂಧಿಸಲಾಗಿದೆಎಂದು ವಿವರಿಸಿದರು.
ಪೊಲೀಸರು ಅವರ ವಿರುದ್ಧ ಹಾಕಿರುವ ಮೂರು ಪ್ರಕರಣಗಳ (196 (1), 352, 353(2) ಸೆಕ್ಷನ್‌ಗಳಲ್ಲಿ ಗರಿಷ್ಠ ಮೂರು ವರ್ಷ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಈ ಪ್ರಕರಣದಲ್ಲಿ ನನ್ನ ಕಕ್ಷಿದಾರರನ್ನು ಬಂಧಿಸುವಂತ ಯಾವುದೇ ಘೋರ ಅಪರಾಧ ಮಾಡಿಲ್ಲ. ಬಂಧನವು ಆರ್ಟಿಕಲ್ 19ನ್ನು ಕಸಿದುಕೊಂಡಂತೆ ಎಂದರು.
ನನ್ನ ಕಕ್ಷಿದಾರರಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ 190/130 ಬಿಪಿ ಇದ್ದು, ಇಸಿಜಿಯನ್ನು ಮಾಡಲಾಗಿದೆ. ಅಲ್ಲದೇ ನನ್ನ ಕಕ್ಷಿದಾರರಿಂದ ಯಾವುದೇ ರೀತಿಯ ಸಾರ್ವಜನಿಕ ಶಾಂತಿಭಂಗ ಉಂಟಾಗಿಲ್ಲ ಎಂದು ವಿಜಯ ವಾಸು ಪೂಜಾರಿ ವಾದಿಸಿದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅಪರ ಸರಕಾರಿ ಅಭಿಯೋಜಕಿ ಮೋಹಿನಿ ವಾದಿಸಿ, ಆರೋಪಿಗೆ ಈಗಾಗಲೇ ನೋಟಿಸ್‌ಗಳನ್ನು ನೀಡಲಾಗಿದೆ. ಆರೋಪಿಯ ಮೇಲೆ 24 ಕೇಸ್‌ಗಳಿವೆ ಎಂದರು.
ಕಕ್ಷಿದಾರ ಹಾಗು ಸರಕಾರದ ವಾದವನ್ನು ಆಲಿಸಿದ ನ್ಯಾಯಾಧೀಶರು ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ನ್ಯಾಯಾಂಗ ಬಂಧನ ವಿಧಿಸಿದರು. ಮುಂದಿನ ವಿಚಾರಣೆಯನ್ನು ಆ.23 ಕ್ಕೆ ನಿಗದಿಪಡಿಸಲಾಗಿದೆ.
ಆಕ್ಷೇಪಣೆಗೆ ಚರ್ಚೆ
ಆರೋಪಿಯ ಜಾಮೀನು ಅರ್ಜಿ ವಿಚಾರಣೆಗೆ ಅಪರ ಸರಕಾರಿ ಅಭಿಯೋಜಕಿ ಅವರು ಆ.22ರಂದೇ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಬೇಕು ಎಂದು ಕಕ್ಷಿದಾರರ ಪರ ವಕೀಲ ವಿಜಯ ವಾಸು ಪೂಜಾರಿ ವಿನಂತಿಸಿ ದರು. ಇದಕ್ಕೆ ಎಪಿಪಿ ಸಮಯವಕಾಶ ಕೇಳಿದಾಗ, ಅಭಿಯೋಜಕರು ಹಾಗು ಕಕ್ಷಿದಾರರ ವಕೀಲರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ನ್ಯಾಯಾಧೀಶರು ಆ.23ಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದರು.







