ಕುಂದಾಪುರ ಪುರಸಭೆ| 23 ವಾರ್ಡ್‌ಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ತಾಣ

ಕುಂದಾಪುರ, ಜೂ.23: ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಪ್ರಾಣಿ ಕಲ್ಯಾಣದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕುಂದಾಪುರ ಪುರಸಭೆಯ ಎಲ್ಲ 23 ವಾರ್ಡ್‌ಗಳಲ್ಲಿಯೂ ಬೀದಿ ನಾಯಿಗಳಿಗೆ ಆಹಾರ ನೀಡುವ ವಲಯಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಉಳಿದ ಅನ್ನ, ತಿಂಡಿಗಳನ್ನು ಆ ಆಹಾರ ತಾಣಗಳಲ್ಲಿ ತಂದು ಹಾಕಬಹುದು.
ಇನ್ನು ಈ ಆಹಾರ ಹಾಕುವ ತಾಣಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಿನ್ನಾಭಿಪ್ರಾಯಗಳೂ ಇದೆ. ಸಾರ್ವಜನಿಕ ಹಿತಾಸಕ್ತಿ, ಮಕ್ಕಳ ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಆರೋಗ್ಯದ ಮಾನದಂಡಗಳು, ವಾಹನ ಸಂಚಾರದ ಮೇಲೆ ಪರಿಣಾಮ, ಸ್ಥಳೀಯರ ಅಭಿಪ್ರಾಯ, ನಾಯಿಗಳ ವರ್ತನೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗಳಿಗೆ ಧಕ್ಕೆಯಾಗ ದಂತೆ ಪುರಸಭೆ ಗಮನಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಮನವಿ.
ಸುಪ್ರೀಂ ಆದೇಶದ ಅನ್ವಯ, ಜಿಲ್ಲಾ ಸಮಿತಿಯ ನಿರ್ದೇಶನದಂತೆ ಕುಂದಾಪುರ ಪುರಸಭೆಯಿಂದ ತಿಂಗಳ ಹಿಂದೆ ಮೊದಲ ಬಾರಿಗೆ ಐದು ಕಡೆಗಳಲ್ಲಿ ಆಹಾರ ವಲಯ ಆರಂಭಿಸಲಾಗಿತ್ತು. ಫೆರ್ರಿ ಪಾರ್ಕ್ ಸಮೀಪ, ಪಶು ಆಸ್ಪತ್ರೆ ಬಳಿ, ನೆಹರೂ ಮೈದಾನ ಹತ್ತಿರ, ಸಂಗಮ್ ನ ಹಳೆಕೋಟೆ ಬಳಿ ಹಾಗೂ ಕೋಡಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಿ, ಫಲಕಗಳನ್ನು ಸಹ ಅಳವಡಿಸಲಾಗಿತ್ತು.
ಅದನ್ನು ಈಗ ಎಲ್ಲ ವಾರ್ಡಿಗೂ ವಿಸ್ತರಿಸಲಾಗಿದ್ದು, 23 ವಾರ್ಡ್ ಗಳಲ್ಲಿಯೂ ಆಹಾರ ತಾಣವನ್ನು ಗುರುತಿಸಲಾಗಿದೆ. ಮುಖ್ಯವಾಗಿ ಪಾರ್ಕ್ ಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆ ಪ್ರದೇಶ, ಮೀನು ಮಾರುಕಟ್ಟೆ, ಜನವಸತಿ, ವಾಣಿಜ್ಯ ಮಹಡಿಗಳು ಇರುವ ಕಡೆಗಳ ಹತ್ತಿರ ಈ ಆಹಾರ ತಾಣಗಳನ್ನು ಆರಂಭಿಸಲಾಗಿದೆ. ಈಗ ಪ್ರತೀ ವಾರ್ಡ್ ಗೆ 1 ಕಡೆ ಮಾತ್ರ ಆಹಾರ ತಾಣ ತೆರೆಯಲಾಗಿದ್ದು, ಸುಪ್ರೀಂ ನಿರ್ದೇಶನದ ಪ್ರಕಾರ ವಾರ್ಡ್ ಗಳಲ್ಲಿ ಕನಿಷ್ಠ 2 ಕಡೆ ಮಾಡಬೇಕಾಗಿದೆ. ಜಿಲ್ಲಾ ಮಟ್ಟದ ಸಮಿತಿಯ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ 2 ಕಡೆಗಳಲ್ಲಿ ಆಹಾರ ತಾಣ ತೆರೆಯಲಾಗುವುದು ಎಂದು ಪುರಸಭೆಯ ಪರಿಸರ ಅಭಿಯಂತರ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ.
ಗುರುತಿನ ಚೀಟಿ: ಬೀದಿ ನಾಯಿಗಳಿಗೆ ಆ ಆಹಾರ ತಾಣಗಳಿಗೆ ಸಾರ್ವಜನಿಕರೇ ಆಹಾರ ಹಾಕಬೇಕಾಗಿದೆ. ಪುರಸಭೆಯಿಂದ ಆಹಾರ ಹಾಕುವ ಪದ್ದತಿಯಿಲ್ಲ. ನಾಯಿಗಳನ್ನು ಹಿಡಿದು, ಸಂತಾನಹರಣ ಚಿಕಿತ್ಸೆ, ರೇಬಿಸ್ ನಿರೋಧಕ ಲಸಿಕೆ ಹಾಕುವುದು ಮಾತ್ರ ಪುರಸಭೆ ಕಾರ್ಯ.
ಹಾಗಾಗಿ ಜನರು ತಮ್ಮ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಉಳಿದ ಅನ್ನ, ತಿಂಡಿ, ಇನ್ನಿತರ ಆಹಾರಗಳನ್ನು ಆ ನಿರ್ದಿಷ್ಟ ತಾಣಗಳಲ್ಲಿ ತಂದು ಹಾಕಬಹುದು. ಈ ಬಗ್ಗೆ ಸಂಘ-ಸಂಸ್ಥೆಗಳು, ಪ್ರಾಣಿ ಪ್ರಿಯರು, ಸ್ವಯಂ ಸೇವಕರು, ಆಸಕ್ತಿ ಇರುವವರು ಸಹ ಮುಂದೆ ಬರಬಹುದು, ಅವರಿಗೆ ಪುರಸಭೆಯಿಂದ ಐಡಿ ಕಾರ್ಡ್ ಕೂಡ ವಿತರಿಸಲಾಗುವುದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
1,014 ಬೀದಿ ನಾಯಿಗಳು
ಪುರಸಭೆ ವ್ಯಾಪ್ತಿಯಲ್ಲಿ 2024ರ ಗಣತಿ ಪ್ರಕಾರ 1,014 ಬೀದಿ ನಾಯಿಗಳಿವೆ. ಅದು ಈಗ ಜಾಸ್ತಿ ಆಗಿರಬಹುದು. ಮುಂದಿನ ವರ್ಷ ಮತ್ತೆ ನಾಯಿಗಳ ಗಣತಿ ನಡೆಯಲಿದೆ. ಈವರೆಗೆ 400ಕ್ಕೂ ಮಿಕ್ಕಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆದಿದೆ. ಈ ಪ್ರಕ್ರಿಯೆ ಪುರಸಭೆಯಿಂದ ನಿರಂತರವಾಗಿ ನಡೆಯುತ್ತಿದೆ.
ಬೀದಿ ನಾಯಿಗಳಿಗೆ ನಿರ್ದಿಷ್ಟ ತಾಣಗಳಲ್ಲಿ ಆಹಾರ ನೀಡುವುದರಿಂದ ಯಾವ ತೊಂದರೆಯೂ ಆಗಲ್ಲ. ನಾಯಿಗಳಿಗೆ ಆಹಾರ ನೀಡುವ ವಿಚಾರದಲ್ಲಿ ಜನರ ಸಹಕಾರ ಬಹಳ ಮುಖ್ಯ. ಮಕ್ಕಳನ್ನು ಆದಷ್ಟು ಬೀದಿಗೆ ಬಿಡದಂತೆ ಎಚ್ಚರ ವಹಿಸಿದರೆ ಸಾಕು. ಪುರಸಭೆಯಿಂದ ನಿರಂತರವಾಗಿ ಬೀದಿ ನಾಯಿಗಳನ್ನು ಗುರುತಿಸಿ, ಸಂತಾನಹರಣ ಚಿಕಿತ್ಸೆ ನಡೆಸುವ ಮೂಲಕ ಸಂತತಿ ಹೆಚ್ಚಳ ಆಗದಂತೆ ಕ್ರಮವಹಿಸಲಾಗುತ್ತಿದೆ. ಅದಕ್ಕಾಗಿ ನಾಯಿ ಹಿಡಿಯುವ ತಜ್ಞರಿಗಾಗಿ ಟೆಂರ್ಡ ಕೂಡ ಕರೆಯಲಾಗಿದೆ. ಸದ್ಯ ಈ ಕಾರ್ಯವನ್ನು ಪುರಸಭೆಯಿಂದಲೇ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಆಶ್ರಯ ತಾಣ ಮಾಡುವ ಯೋಚನೆಯಿದೆ’
-ಆನಂದ್ ಜೆ., ಪುರಸಭೆ ಮುಖ್ಯಾಧಿಕಾರಿ ಕುಂದಾಪುರ






