ಉಡುಪಿ ನಗರಸಭೆಯಿಂದ ರೇಷನಿಂಗ್ ಸ್ಥಗಿತ: 24 ಗಂಟೆ ನೀರು ಪೂರೈಕೆ

ಉಡುಪಿ, ಮೇ 25: ಕಳೆದ ಒಂದು ವಾರದಿಂದ ಉಡುಪಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಹಿರಿಯಡಕ ಸ್ವರ್ಣಾ ನದಿ ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಬಗ್ಗೆ ವರದಿಯಾಗಿದೆ.
ನೀರಿನ ಕೊರತೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಉಡುಪಿ ನಗರಸಭೆಯಿಂದ ಆರಂಭಿಸಿರುವ ಕುಡಿಯುವ ನೀರಿನ ರೇಷನಿಂಗ್ ಪದ್ಧತಿಯನ್ನು ರದ್ದುಗೊಳಿಸಿ, ನಿರಂತರ ನೀರು ಪೂರೈಕೆ ಮಾಡುವುದಾಗಿ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಮತ್ತು ಪಶ್ಚಿಮಘಟ್ಟ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಕಾರ್ಕಳ ಮುಂಡ್ಲಿ ಅಣೆಕಟ್ಟಿನಲ್ಲಿ ನೀರು ತುಂಬಿದೆ. ಈ ಅಣೆಕಟ್ಟಿನಲ್ಲಿ 2 ಬಾಗಿಲುಗಳನ್ನು ತೆರೆದಿರುವುದಿಂದ ಸ್ವರ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಿದೆ. ಇದರಿಂದ ಸಾಕಷ್ಟು ಪ್ರಮಾಣದ ನೀರು ಬಜೆ ಡ್ಯಾಂನಲ್ಲಿ ಶೇಖರಣೆ ಯಾಗುತ್ತಿದೆ. ರೇಶನಿಂಗ್ ವ್ಯವಸ್ಥೆಯಡಿ ಎರಡು ದಿನಕ್ಕೊಮ್ಮೆ ಪೂರೈಕೆ ಮಾಡುವ ಪದ್ಧತಿಯನ್ನು ಕೈಬಿಟ್ಟು, ಮೇ 26ರಿಂದ ನಿರಂತರವಾಗಿ ನೀರು ಸರಬರಾಜು ಮಾಡಲಾಗುವುದೆಂದು ಪೌರಾಯುಕ್ತ ರಾಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





