ಉಡುಪಿ: ಜ.24ಕ್ಕೆ ಎರಡು ಕೃತಿಗಳ ಬಿಡುಗಡೆ

ಉಡುಪಿ, ಜ.21:ಮುದ್ದಣನ 155ನೇ ಜನ್ಮದಿನ ಸಂಭ್ರಮದ ಪ್ರಯುಕ್ತ ಜ.24ರಂದು ಎಂ.ಜಿ.ಎಂ ಕಾಲೇಜಿನ ನೂತನ ರೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಹಾಗೂ ಮುದ್ದಣ ಪ್ರಕಾಶನ ನಂದಳಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ಅಪೂರ್ವ ಕೃತಿಗಳು ಬಿಡುಗಡೆಗೊಳ್ಳಲಿವೆ.
ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮುದ್ದಣ ಕವಿ ರಚಿತಂ (ಪರಿಷ್ಕೃತ ತೃತೀಯ ಮುದ್ರಣ-ಟಿಪ್ಪಣಿ ಸಾರ ಸಮೇತ) ಡಾ. ಪಾದೇಕಲ್ಲು ವಿಷ್ಣುಭಟ್ಟರ ಸಂಪಾದಕತ್ವದಲ್ಲಿ ‘ಶ್ರೀರಾಮಾಶ್ವಮೇಧಂ’ ಹಾಗೂ ಕೆ. ಎಲ್. ಕುಂಡಂತಾಯ ಮತ್ತು ನಂದಳಿಕೆ ಬಾಲಚಂದ್ರ ರಾವ್ ಇವರ ಸಂಪಾದಕತ್ವ ದಲ್ಲಿ ‘ನಂದಳಿಕೆ ಐಸಿರಿ ದರ್ಶನ’ ಕೃತಿಗಳ ಲೋಕಾರ್ಪಣೆ ಅಂದು ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ವಹಿಸಲಿದ್ದಾರೆ. ಹಿರಿಯ ವಿದ್ವಾಂಸ ರಾದ ಡಾ. ಬಿ.ಎ ವಿವೇಕ ರೈ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಬಹುಭಾಷಾ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಕೃತಿ ಪರಿಚಯ ಮಾಡಲಿದ್ದಾರೆ. ವೇದಿಕೆಯಲ್ಲಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ, ನಂದಳಿಕೆಯ ಎನ್. ಸುಹಾಸ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.







