ಉಡುಪಿ: ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 24,575 ಪ್ರಕರಣ ಇತ್ಯರ್ಥ

ಉಡುಪಿ, ಸೆ.13: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇಂದು ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಆಯೋಜಿಸಿದ್ದು, ಒಂದೇ ದಿನದಲ್ಲಿ ಒಟ್ಟು 24,575 ಪ್ರಕರಣಗಳನ್ನು ಇತ್ಯರ್ಥ ಪಡಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 24,575 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥ ಪಡಿಸುವ ಮೂಲಕ ಒಟ್ಟು 11,47,73,768 ರೂ.ಗಳ ಪರಿಹಾರದ ಮೊತ್ತವನ್ನು ಸಹ ಘೋಷಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ-19, ಚೆಕ್ಕು ಅಮಾನ್ಯ ಪ್ರಕರಣ-189, ಬ್ಯಾಂಕ್/ಹಣ ವಸೂಲಾತಿ ಪ್ರಕರಮ-9, ಎಂವಿಸಿ ಪ್ರಕರಣ-80, ಸಿವಿಲ್ ಪ್ರಕರಣ-162, ಇತರೇ ಕ್ರಿಮಿನಲ್ ಪ್ರಕರಣ-3423, ಕಾರ್ಮಿಕ ವ್ಯಾಜ್ಯ-1, ಎಂಎಂಆರ್‌ಡಿ-4 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು-20,688ನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿ 11.47 ಕೋಟಿ ರೂ.ಪರಿಹಾರ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಬ್ರಹ್ಮಾವರ, ಅಭಿಯೋಜನ ಇಲಾಖೆ, ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರೆ ಸರಕಾರಿ ಇಲಾಖೆಗಳ ಸಂಪೂರ್ಣ ಸಹಕಾರದೊಂದಿಗೆ ಇಂದಿನ ಲೋಕ್ ಅದಾಲತ್ ಯಶಸ್ವಿಗೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಮತ್ತೆ ಒಂದಾದ ದಂಪತಿ
ಎಂಟು ವರ್ಷಗಳಿಂದ ದೂರವಿದ್ದು, ಉಡುಪಿ ಪ್ರಧಾನ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯದಲ್ಲಿ ದಂಡ ಪ್ರಕ್ರಿಯಾ ಸಂಹಿತೆ ಕಾಯ್ದೆಯಡಿ ಯಲ್ಲಿ ಜೀವನಾಂಶ ಕೋರಿ ಕ್ರಿಮಿನಲ್ ಕೇಸ್ ದಾಖಲಿಸಿದ್ದ ಪ್ರಕರಣದಲ್ಲಿ ನ್ಯಾಯಾ ಧೀಶರ ಹಾಗೂ ನ್ಯಾಯಾಧೀಶರೇತರ ಸಂಧಾನಕಾರರ ಸಲಹೆ ಹಾಗೂ ಮಾರ್ಗದರ್ಶನದಂತೆ ದಂಪತಿಗಳು 3,00,000ರೂ. ಜೀವನಾಂಶಕ್ಕೆ ರಾಜೀಯಾಗಿ ತಮ್ಮ ವೈವಾಹಿಕ ಜೀವನವನ್ನು ಒಟ್ಟಾಗಿ ಮುಂದುವರಿಸಲು ನಿರ್ಧರಿಸಿದ್ದಾರೆ.
ಉಡುಪಿಯ ನ್ಯಾಯವಾದಿ ಕ್ಯಾಸ್ಟೋಲಿನೋ ಹಿಲ್ಡಾ ಅವರು ಅರ್ಜಿದಾರರ ವಕಾಲತ್ತು ವಹಿಸಿದ್ದರೆ, ವಿಜಯ್ ವಾಸು ಪೂಜಾರಿ ಎದುರುದಾರರ ಪರ ವಕಾಲತ್ತು ವಹಿಸಿದ್ದರು. ಇಬ್ಬರೂ ಸಹ ಅರ್ಜಿದಾರರ ಹಾಗೂ ಎದುರುದಾರರ ಮನವೊಲಿಸಲು ಸಹಕರಿಸಿದ್ದರು ಎಂದು ಪ್ರಾಧಿಕಾರದ ಪತ್ರಿಕಾ ಹೇಳಿಕೆ ತಿಳಿಸಿದೆ.







