ಜಲ್‌ಜೀವನ್ ಮಿಷನ್‌ನಲ್ಲಿ 2.47 ಲಕ್ಷ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕದ ಗುರಿ: ಉಡುಪಿ ಜಿಪಂ ಸಿಇಓ ಪ್ರತೀಕ್ ಬಾಯಲ್

ಉಡುಪಿ, ಮಾ.14: ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವ ಜಲ್‌ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 2,47,000 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಗುರಿ ಇದ್ದು, ಇದುವರೆಗೆ 2,14,000 ಮನೆಗಳಿಗೆ ನಳ್ಳಿ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಬಾಕಿ ಉಳಿದ ಮನೆಗಳಿಗೂ ನಳ್ಳಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಅಭಿಯಂತರರಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಪಂಚಾಯತ್‌ನ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಲ ಜೀವನ್ ಮಿಷನ್ ಯೋಜನೆಯಡಿ 525 ಕಾಮಗಾರಿಗಳನ್ನು 687.66 ಕೋ. ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 484 ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಉಳಿದ 41 ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ 501.40 ಕೋಟಿ ರೂ. ಯೋಜನೆಗಾಗಿ ಖರ್ಚು ಮಾಡಲಾಗಿದೆ ಎಂದವರು ವಿವರಿಸಿದರು.
ಶೇ.92ರಷ್ಟು ಕಾಮಗಾರಿ ಪೂರ್ಣ: ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ನಲ್ಲಿ ನೀರು ಪೂರೈಸುವ ಈ ಯೋಜನೆಯ ಕಾಮಗಾರಿ ಈಗಾಗಲೇ ಶೇ.92ರಷ್ಟು ಪೂರ್ಣಗೊಂಡಿವೆ. ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲರೂ ಜಾಗ್ರತಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ ಒಂದು ವರ್ಷದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕೈಗೊಳ್ಳಲು ಯಾವುದೇ ಜಾಗದ ಸಮಸ್ಯೆ ಗಳು ಇಲ್ಲ. ಆದರೂ ಸಹ ಕಾಮಗಾರಿ ಪೂರ್ಣ ಗೊಂಡಿಲ್ಲ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳನ್ನು ಹೇಳಲಾಗುತ್ತಿದೆ. ಇದು ಸರಿಯಲ್ಲ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಇದ್ದಲ್ಲಿ ಗುತ್ತಿಗೆದಾರರಿಗೆ ದಂಡ ಹಾಕಬೇಕು ಎಂದು ಪ್ರತೀಕ್ ಬಾಯಲ್ ಎಚ್ಚರಿಸಿದರು.
ಮಳೆ ನೀರು ಕೊಯ್ಲು ಕಡ್ಡಾಯ: ಕೆಲವು ಕಡೆಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ನಳ್ಳಿ ಸಂಪರ್ಕದ ಪೈಪ್‌ಲೈನ್ ಹಾಕುವ ಕಾಮಗಾರಿ ಪೂರ್ಣ ಗೊಂಡಿದ್ದರು ಸಹ, ನೀರಿನ ಮೂಲಗಳಿಲ್ಲದೇ ನೀರನ್ನು ಒದಗಿ ಸಲು ಆಗುತ್ತಿಲ್ಲ. ಸಮೀಪದ ನೀರಿನ ಮೂಲ ವ್ಯವಸ್ಥೆಯನ್ನು ನೋಡಿ ಅವುಗಳಿಗೆ ನೀರು ಒದಗಿಸಬೇಕು. ಹೊಸದಾಗಿ ಬೋರ್ವೆಲ್‌ಗಳನ್ನು ಅಳವಡಿಸುವಾಗ ಅವುಗಳಿಗೆ ಮಳೆ ನೀರಿನ ಕೊಯ್ಲು ಕಾಮಗಾರಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈಗಾಗಲೇ ಗ್ರಾಮೀಣ ಭಾಗದಲ್ಲಿರುವ ಸರಕಾರದ ಬೋರ್‌ವೆಲ್‌ಗಳಿಗೆ ಮಳೆ ನೀರಿನ ಕೊಯ್ಲು ಅಳವಡಿಸಿರುವ ಕುರಿತು ಮಾಹಿತಿಯನ್ನು ಕ್ರೋಢಿಕರಿಸಿ ನೀಡಬೇಕು ಎಂದು ಸಿಇಒ ಸೂಚಿಸಿದರು.
ಈ ಬಾರಿಯ ಬೇಸಿಗೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಒಂದೊಮ್ಮೆ ನೀರಿನ ಸರಬರಾಜಿನ ಸಮಸ್ಯೆ ಉಂಟಾದಲ್ಲಿ ಸಮೀಪದ ಖಾಸಗಿ ಬೋರೆವೆಲ್ ಮಾಲಕರಿಂದ ಪಡೆಯಲು ಅನುಕೂಲವಾಗುವಂತೆ ಗುರುತಿಸಿಟ್ಟುಕೊಳ್ಳಬೇಕು. ಅವರೊಂದಿಗೆ ಒಪ್ಪಂದ ಮಾಡಿಕೊಂಡು ಸಮಸ್ಯೆಯಾದಲ್ಲಿ ನೀರು ಸರಬ ರಾಜು ಮಾಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಕೆಲವು ಕಡೆ ಕುಡಿಯುವ ನೀರು ಸೌಲಭ್ಯ ಒದಗಿಸುವ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ಐದು ವರ್ಷಗಳಿಂದ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಗಳನ್ನು ಕಲೆಹಾಕಿ ಓವರ್‌ಲ್ಯಾಪ್ ಅಗದಂತೆ ಎಚ್ಚರವಹಿಸಬೇಕು ಎಂದರು.
ಸಭೆಯಲ್ಲಿ ಪೌರಯುಕ್ತ ಡಾ.ಉದಯಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಉದಯ್‌ಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾ ಅಧಿಕಾರಿ ರವೀಂದ್ರ ಕುಮಾರ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ದಿನಕರ ಶೆಟ್ಟಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
"ಜಿಲ್ಲೆಯಾದ್ಯಂತ ಕುಡಿಯಲು ಯೋಗ್ಯವಾಗಿರುವ ಸ್ವಚ್ಛ ನೀರನ್ನು ಸರಬರಾಜು ಮಾಡಬೇಕು. ಎಲ್ಲಿಯೂ ಸಹ ಕಲುಷಿತ ನೀರು ಸರಬರಾಜು ಆಗದಂತೆ ಎಲ್ಲಾ ರೀತಿಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದ ಗ್ರಾಮಗಳನ್ನು ಗುರುತಿಸಿ, ಈ ಬಾರಿ ಅಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಯೋಜನೆ ಯನ್ನು ಸಿದ್ದಗೊಳಿಸಬೇಕು"
-ಪ್ರತೀಕ್ ಬಾಯಲ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ.







