ಆಯಿಲ್ ಫ್ಯಾಕ್ಟರಿ ಮಾಲಕಿಗೆ 2.5 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕೋಟ, ಆ.16: ಗೇರು ಆಯಿಲ್ ಖರೀದಿ ಮಾಡುವ ಹೆಸರಿನಲ್ಲಿ ಆಯಿಲ್ ಫ್ಯಾಕ್ಟರಿ ಮಾಲಕರೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ವೀಣಾ ಎಂಬವರು ಗೇರು ಆಯಿಲ್ ಫ್ಯಾಕ್ಟರಿ ನಡೆಸಿ ಕೊಂಡಿದ್ದು, ಅಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಖುನಾಲ್ ಚೌಧರಿ ಎಂಬಾತ ತಾನು ಯಲಹಂಕ ಬಿಎಸ್‌ಎಫ್ ಪರಚೇಸರ್ ಆಫೀಸರ್ ಎಂಬುದಾಗಿ ಹೇಳಿಕೊಂಡು ಕರೆ ಮಾಡಿ, 30 ಟನ್ ಆಯಿಲ್ ಕಳುಹಿಸಲು ಹೇಳಿದ್ದು ಅದರಂತೆ ವೀಣಾ ಆ.14ರಂದು 30 ಟನ್ ಆಯಿಲ್ ಟ್ಯಾಂಕರ್‌ಗೆ ತುಂಬಿಸಿ ಬೆಂಗಳೂರುನ ವಿಳಾಸಕ್ಕೆ ಕಳುಹಿಸಿದ್ದರು.
ಮತ್ತೆ ಕರೆ ಮಾಡಿದ ಆರೋಪಿ, ಆ.15ರಂದು ರಜೆ, ಗೇಟ್ ಪಾಸ್ ಆನ್ ಲೈನ್ ಬೇಗ ಮಾಡಬೇಕು, ಗೇಟ್ ಪಾಸ್ ಮಾಡದಿದ್ದರೆ ಹಣ ಸಿಗಲು 2-3 ದಿನ ಆಗುತ್ತದೆ ಎಂದು ಹೇಳಿ 5 ರೂ. ಕಳುಹಿಸಲು ತಿಳಿಸಿದ್ದನು. ಅದರಂತೆ ವೀಣಾ ತನ್ನ ಮಗನ ಬ್ಯಾಂಕ್ ಖಾತೆಯಿಂದ 5 ರೂ. ಹಾಕಿದ್ದು ಆರೋಪಿ 10 ರೂ. ವಾಪಾಸ್ಸು ಹಾಕಿದನು.
ಆರೋಪಿಯು ಮತ್ತೆ ಕರೆ ಮಾಡಿ ಸೆಕ್ಯೂರಿಟಿ ಡೆಪಾಸಿಟ್ 2.5 ಲಕ್ಷ ರೂ. ಹಣ ಕಳುಹಿಸುವಂತೆ ತಿಳಿಸಿದ್ದು ಅದರಂತೆ ವೀಣಾ ಒಟ್ಟು 2,45,486ರೂ. ಹಣ ಹಾಕಿದ್ದರು. ಆರೋಪಿ ನಂಬಿಸಿ ಆನ್‌ಲೈನ್ ಮೂಲಕ ವಂಚಿಸಿ ಹಣ ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.







