ಮೇ 25ಕ್ಕೆ ಶ್ರೀವಿಶ್ವೇಶತೀರ್ಥ ಸ್ಮತಿವನ ಉದ್ಘಾಟನೆ
ಉಡುಪಿ, ಮೇ 22: ಅರಣ್ಯ ಇಲಾಖೆ ಹಾಗೂ ಉಡುಪಿಯ ಶ್ರೀಪೇಜಾವರ ಮಠದ ಸಹಯೋಗದಲ್ಲಿ ಜಿಲ್ಲೆಯ ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದಲ್ಲಿ ನಿರ್ಮಾಣಗೊಂಡ ಶ್ರೀವಿಶ್ವೇಶತೀರ್ಥ ಸ್ಮತಿವನ ವನ್ನು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಮೇ 25ರ ಸಂಜೆ 4:30ಕ್ಕೆ ಉದ್ಘಾಟಿಸಲಿದ್ದಾರೆ.
ಬ್ರಹ್ಮಾವರ ಸಮೀಪದ ನೀಲಾವರದಲ್ಲಿರುವ ಪೇಜಾವರ ಮಠದ ಗೋಶಾಲೆಯ ಆವರಣದಲ್ಲಿ ಈ ಕಾರ್ಯಕ್ರಮ ಜರಗಲಿದೆ. ಸ್ಮತಿವನದಲ್ಲಿ ನಿರ್ಮಾಣಗೊಂಡಿರುವ ಶ್ರೀವಿಶ್ವೇಶತೀರ್ಥ ಶ್ರೀಪಾದರ ಕಂಚಿನ ಪುತ್ಥಳಿಯನ್ನೂ ಸಚಿವರು ಅನಾವರಣಗೊಳಿಸಲಿದ್ದಾರೆ.
ಜಿಲ್ಲಾ ನಿರ್ಮಿತಿ ಕೇಂದ್ರ ಸುಮಾರು ಎರಡು ಕೋಟಿ ರೂ.ವೆಚ್ಚದ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣೆಯಲ್ಲಿ 2021ರಲ್ಲಿ ಸ್ಮತಿವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸೋಮವಾರ ಸಂಜೆ ಸಚಿವ ಈಶ್ವರ ಖಂಡ್ರೆ ಅವರು ವನವನ್ನು ಉದ್ಘಾಟಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪೋಟೊ ಗ್ಯಾಲರಿ ಉದ್ಘಾಟಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ ಸೇರಿದಂತೆ ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಚಿವ ಖಂಡ್ರೆ ಪ್ರವಾಸ: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮೇ 25ರಂದು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 8:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಸಚಿವರು ಕಟೀಲಿಗೆ ತೆರಳಿ 10:30ಕ್ಕೆ ಕಾರ್ಕಳಕ್ಕೆ ಆಗಮಿಸಲಿದ್ದಾರೆ. ಕಾರ್ಕಳದಲ್ಲಿ ಕಾರ್ಕಳ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಕಚೇರಿ, ಕುದುರೆಮುಖ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಕಳ ಕಚೇರಿ ಉದ್ಘಾಟಿಸಲಿದ್ದಾರೆ.
ಅಪರಾಹ್ನ 12:30ಕ್ಕೆ ಉಡುಪಿಗೆ ಆಗಮಿಸುವ ಸಚಿವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. 4:30ಕ್ಕೆ ನೀಲಾವರದಲ್ಲಿ ಶ್ರೀವಿಶ್ವೇಶತೀರ್ಥ ಸ್ಮತಿವನವ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ 5:30ಕ್ಕೆ ಮುರುಡೇಶ್ವರಕ್ಕೆ ತೆರಳಲಿದ್ದಾರೆ.






