ಉಡುಪಿ: ಆ.25ರಂದು ಮೀಲಾದುನ್ನಬಿ ರಜೆ ನೀಡಲು ಡಿಸಿ, ಉಸ್ತುವಾರಿ ಸಚಿವರಿಗೆ ಮನವಿ

ಉಡುಪಿ, ಆ.21: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ.)ರವರ ಪವಿತ್ರ ಮೀಲಾದುನ್ನಬಿ ಪ್ರಯುಕ್ತ ಆ.25 ರಂದು ಸಾರ್ವತ್ರಿಕ ರಜೆ ನೀಡುವಂತೆ ಆಗ್ರಹಿಸಿ ಸುನ್ನೀ ಕೋ-ಓರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರಕಾರ ಮೀಲಾದುನ್ನಬಿ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಆ.26ರಂದು ನಿಗದಿಪಡಿಸಿದ್ದು, ಚಂದ್ರದರ್ಶನ ದಲ್ಲಿ ಉಂಟಾದ ವ್ಯತ್ಯಾಸದ ಹಿನ್ನೆಲೆಯಲ್ಲಿ ಆ.25ರಂದು ಮೀಲಾದುನ್ನಬಿಯನ್ನು ಆಚರಿಸಬೇಕೆಂದು ಜಿಲ್ಲೆಯ ಖಾಝಿಗಳು ನಿರ್ಧರಿಸಿದ್ದಾರೆ.
ಆದುದರಿಂದ ಆ.26ರಂದು ನಿಗದಿಪಡಿಸಿರುವ ಸಾರ್ವತ್ರಿಕ ರಜೆಯನ್ನು ಆ.25ರಂದು ಮೀಲಾದುನ್ನಬಿ ಪ್ರಯುಕ್ತ ರಜೆಯಾಗಿ ಬದಲಾಯಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅದೇ ರೀತಿ, ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಅವರಿಗೆ ಈ ಕುರಿತು ಇ-ಮೇಲ್ ಮೂಲಕವೂ ಮನವಿ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು.
ನಿಯೋಗದಲ್ಲಿ ಸುನ್ನೀ ಕೋ-ಓರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ, ವಕೀಲ ಹಬೀಬ್ ಅಲಿ ಅಂಬಾಗಿಲು, ಸುಭಾನ್ ಅಹ್ಮದ್ ಹೊನ್ನಾಳ, ವಸೀಮ್ ಬಾಷಾ ಕುಂದಾಪುರ, ಶೇಖ್ ನಹೀಮ್ ಕಟಪಾಡಿ ಹಾಗೂ ಅಶ್ರಫ್ ತೋನ್ಸೆ ಉಪಸ್ಥಿತರಿದ್ದರು.
ರಜೆ ಬದಲಾವಣೆಗೆ ಆಗ್ರಹ: ಪ್ರವಾದಿ ಮುಹಮ್ಮದ್(ಸ.ಅ.) ರವರ ಮೀಲಾದ್‌ನ್ನು ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 25ರಂದು ಆಚರಿಸುತ್ತಿದ್ದು ಆ ದಿನ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಸರಕಾರಿ ರಜೆ ಘೋಷಿಸಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಒತ್ತಾಯಿಸಿದ್ದಾರೆ.
ಮೀಲಾದ್ ಸಂಬಂಧ ಸರಕಾರಿ ರಜೆಯು 26ಕ್ಕೆ ನಿಗದಿಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮೀಲಾದನ್ನು 25ರಂದು ಆಚರಿಸುವುದರಿಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು, ಸರಕಾರಿ, ಖಾಸಗಿ ನೌಕರರಿಗೆ ಅನುಕೂಲ ವಾಗು ವಂತೆ ರಜೆಯನ್ನು ಬದಲಾವಣೆ ಮಾಡುವುದು ಅನಿವಾರ್ಯ ವಾಗಿದ್ದು ಉಭಯ ಜಿಲ್ಲೆಗಳಲ್ಲಿ 25ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಅವರು ಉಡುಪಿ ಮತ್ತು ದ.ಕ. ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.






