ಶಾರ್ಜಾದಲ್ಲಿ ಹತ್ಯೆಯಾದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಸೆ.25ರಂದು ಭಾರತಕ್ಕೆ

ಕುಂದಾಪುರ, ಸೆ.24: ಶಾರ್ಜಾದಲ್ಲಿ ಜುಲೈನಲ್ಲಿ ನಿಗೂಢವಾಗಿ ಹತ್ಯೆಯಾದ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶಾರ್ಜಾದಿಂದ ಸೆ.25ರಂದು ವಿಮಾನದ ಮೂಲಕ ಹುಟ್ಟೂರಿಗೆ ಬರಲಿದೆ.
ಗುರುವಾರ ರಾತ್ರಿ ಶಾರ್ಜಾದಿಂದ ಪ್ರಕಾಶ್ ಕುಂದರ್ ಅವರ ಸಂಬಂಧಿಕರು ವಿಮಾನದಲ್ಲಿ ಪಾರ್ಥಿವ ಶರೀರ ದೊಂದಿಗೆ ಹೊರಡಲಿದ್ದು, ಶುಕ್ರವಾರ ಬೆಳಗ್ಗಿನ ಜಾವ 4-5 ಗಂಟೆಯ ಸುಮಾರಿಗೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಎಂದು ಮೃತರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ತಿಳಿಸಿದ್ದಾರೆ.
ಅಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಶುಕ್ರವಾರ ಬೆಳಗ್ಗೆ ಮಂಗಳೂರಿನಿಂದ ಕುಂದಾಪುರಕ್ಕೆ ಬರಲಿದ್ದು, ಬೆಳಗ್ಗೆ ಹೊನ್ನನಕೇರಿಯಲ್ಲಿರುವ ಮನೆಗೆ ಕೊಂಡೊಯ್ದು ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿ, ಆ ಬಳಿಕ ಶಾಸ್ತ್ರಿ ಸರ್ಕಲ್ ಬಳಿಯಿರುವ ರುದ್ರಭೂಮಿಯಲ್ಲಿ ಅಪ್ಪ - ಅಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.




