ಬೆಂಗಳೂರು ಕಾಲ್ತುಳಿತ ಪ್ರಕರಣ: ಹೆಬ್ರಿ ಮೂಲದ ಮೃತ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ಹಸ್ತಾಂತರ

ಹೆಬ್ರಿ, ಜೂ.10: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಮೃತ ಹೆಬ್ರಿ ಮೂಲದ ವಿದ್ಯಾರ್ಥಿನಿ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ 25ಲಕ್ಷ ರೂ. ಪರಿಹಾರದ ಚೆಕ್‌ನ್ನು ಮಂಗಳವಾರ ಹಸ್ತಾಂತರಿಸಲಾಯಿತು.
ಹೆಬ್ರಿ ಇಂದಿರಾ ನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡ ಮಾಡಿದ ಪರಿಹಾರಧನ ಚೆಕ್‌ನ್ನು ಮೃತರ ತಂದೆ ಕರುಣಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಬಳಿಕ ಜಿಲ್ಲಾಧಿಕಾರಿ ಮೃತರ ತಂದೆ ತಾಯಿ ಮತ್ತು ಸಹೋದರನಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಜಿಲ್ಲಾಧಿಕಾರಿ ಮೃತರ ತಾಯಿಯನ್ನು ತಬ್ಬಿ ಹಿಡಿದು ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಹೇಳಿ ಭಾವುಕರಾದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಕುಂದಾಪುರ ಉಪವಿಭಾ ಗಾಧಿಕಾರಿ ರಶ್ಮಿ, ಹೆಬ್ರಿ ತಹಸಿಲ್ದಾರ್ ಪ್ರಸಾದ್ ಎಸ್.ಎ., ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ., ಹೆಬ್ರಿ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್, ಚಿನ್ಮಯಿ ತಾಯಿ ಶಾಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ಮೂಲದ ಶಾಂತ ಶೆಟ್ಟಿ ಹಾಗೂ ಉಪ್ಪಿನಂಗಡಿ ಮೂಲದ ಕರುಣಾಕರ ಶೆಟ್ಟಿ ದಂಪತಿ ಪುತ್ರಿಯಾಗಿದ್ದ ಚಿನ್ಮಯಿ ಶೆಟ್ಟಿ, ಬೆಂಗಳೂರು ಕನಕಪುರ ರಸ್ತೆಯ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಈ ಕುಟುಂಬ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದೆ. ಮೃತ ಚಿನ್ಮಯಿ ಶೆಟ್ಟಿಯ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಸಿದ್ದು ಮುಂದಿನ ವಿಧಿ ವಿಧಾನಗಳು ಹೆಬ್ರಿಯಲ್ಲಿ ನಡೆಸಲಾ ಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಯಕ್ಷಗಾನ, ಭರತನಾಟ್ಯ, ಫಿಲಂ ಡ್ಯಾನ್ಸ್ ಮೊದಲಾದ ಕಲಾ ಪ್ರಕಾರಗಳಲ್ಲಿ ಪ್ರತಿಭಾವಂತೆಯಾಗಿದ್ದ ಚಿನ್ಮಯಿ ಶೆಟ್ಟಿ, ’ಯಕ್ಷತರಂಗ ಬೆಂಗಳೂರು’ ಇದರನ ಯಕ್ಷಗಾನ ಕಲಿಕಾ ವಿದ್ಯಾರ್ಥಿಯಾಗಿದ್ದರು. ಅಲ್ಲದೆ ಆಕೆ ಪ್ರತಿಭಾ ವಂತ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದಳು.