ಉಡುಪಿ ಜಿಲ್ಲೆಯಲ್ಲಿ 2525 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಉಡುಪಿ, ಸೆ.20: ಉಡುಪಿ ಜಿಲ್ಲೆಯಲ್ಲಿ ಎಬಿಸಿ ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ 534 ಗಂಡು ಹಾಗೂ 1220 ಹೆಣ್ಣು ಸೇರಿದಂತೆ ಒಟ್ಟು 1754 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್‌ವರೆಗೆ 183 ಗಂಡು, 558 ಹೆಣ್ಣು ಸೇರಿದಂತೆ 771 ನಾಯಿಗಳನ್ನು ಶಸ್ತ್ರಚಿಕಿತ್ಸೆಗೊಳಪಡಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನ ಕೊನೆಯ ಒಳಗೆ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ವೇಗವನ್ನುಹೆಚ್ಚಿಸಬೇಕು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ಇವುಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿವೆ. ರಾತ್ರಿ ಸಮಯದಲ್ಲಿ ರೈಲು ಮತ್ತು ಬಸ್ಸಿನಲ್ಲಿ ಪ್ರಯಾಣಿಸಿ ಬಂದ ಸಾರ್ವಜನಿಕರ ಮೇಲೆ ಅವು ಎರಗುತ್ತವೆ ಎಂಬ ದೂರು ಗಳು ಕೇಳಿ ಬರುತ್ತಿವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರಚಿಕಿತ್ಸೆಯೊಂದೇ ಮಾರ್ಗವಾಗಿದ್ದು, ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷವೂ ಹಣಕಾಸು ಹಂಚಿಕೆ ಮಾಡಿಕೊಂಡು ಅವುಗಳ ಸಂತಾನ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಬಿಸಿ ಕಾರ್ಯಕ್ರಮವನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಸ್ವಚ್ಚ ಹಾಗೂ ನೈರ್ಮಲ್ಯತೆ ಇರುವ ಶಸ್ತ್ರಚಿಕಿತ್ಸಾ ಕೊಠಡಿ, ಅಗತ್ಯ ಪ್ರಮಾಣದ ಕೆನೆಲ್‌ಗಳು, ನಾಯಿಗಳನ್ನು ವೈಜ್ಞಾನಿಕವಾಗಿ ಹಿಡಿಯುವ ವ್ಯವಸ್ಥೆ, ಶಸ್ತ್ರಚಿಕಿತ್ಸೆಯ ಬಳಿಕ ನಾಲ್ಕು ದಿನಗಳ ಕಾಲ ಅವುಗಳ ಆರೈಕೆಗೆ ವ್ಯವಸ್ಥೆ, ನುರಿತ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಅಥವಾ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆಗೆ ಗುತ್ತಿಗೆ ನೀಡಿ ಅದನ್ನು ಅನುಷ್ಠಾನಗೊಳಿಸಬೇಕು ಎಂದರು.
ಪ್ರಾಣಿ ಪಕ್ಷಿಗಳೂ ಭೂಮಿಯ ಮೇಲೆ ನಮ್ಮಂತೆ ಬದುಕುವ ಹಕ್ಕನ್ನು ಹೊಂದಿವೆ. ಅವುಗಳನ್ನು ಉಲ್ಲಂಘಿಸಿ ಪ್ರಾಣಿ-ಪಕ್ಷಿಗಳಿಗೆ ಅನುಚಿತವಾಗಿ ವರ್ತಿಸುವುದು, ಹಿಂಸೆ ನೀಡುವುದು ಕಂಡುಬಂದಲ್ಲಿ ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ ಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುಪ್ರೀಂ ಕೋರ್ಟ್ ನಿಬಂಧನೆ: ಇತ್ತೀಚೆಗೆ ಸರ್ವೋಚ್ಚ ನ್ಯಾಯಲಯ ುಬೀದಿನಾಯಿಗಳ ಹಾವಳಿ ನಿಯಂತ್ರಣ ಹಾಗೂ ಜನರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಂಚಾಯತ್‌ಗಳ ದ್ದಾಗಿದೆ ಎಂದಿದ್ದು, ಎಬಿಸಿ ಕಾರ್ಯಕ್ರಮದ ಅನುಷ್ಠಾನದ ಜೊತೆಗೆ ಅವುಗಳಿಗೆ ಆಹಾರ ನೀಡಲು ವಾರ್ಡ್‌ವಾರು ನಿಗದಿತ ಸ್ಥಳಗಳನ್ನು ಗುರುತಿ ಸಲು, ರೇಬೀಸ್ ರೋಗಪೀಡಿತ ಹಾಗೂ ಆಕ್ರಮಣಕಾರಿ ಸ್ವಭಾವ ಹೊಂದಿರುವ ನಾಯಿಗಳನ್ನು ಪ್ರತ್ಯೇಕ ಶೆಲ್ಟರ್‌ಗಳಲ್ಲಿ ಇಟ್ಟು ಲಸಿಕೆ ಹಾಗೂ ಪ್ರತಿರೋಧಕಗಳನ್ನು ನೀಡುವ ಜೊತೆಗೆ ಹೆಲ್ಪ್‌ಲೈನ್‌ಗಳನ್ನು ಸ್ಥಾಪಿಸಲು ನಿರ್ದೇಶಿಸಿದೆ ಎಂದರು.
ರೇಬೀಸ್ ಹಾಗೂ ಪ್ರಾಣಿಜನ್ಯ ರೋಗಗಳ ಲಸಿಕಾ ಅಭಿಯಾನ ಕಾರ್ಯಕ್ರಮದಡಿ ಸಾಕು ಹಾಗೂ ಬೀದಿ ನಾಯಿ ಮತ್ತು ಬೆಕ್ಕುಗಳಿಗೆ ರೇಬೀಸ್ ಲಸಿಕೆಗಳನ್ನು ಉಚಿತವಾಗಿ ಜಿಲ್ಲೆಯ ಪ್ರತಿಯೊಂದು ಪಶು ಆಸ್ಪತ್ರೆ ಗಳಲ್ಲಿ ನೀಡಲಾಗು ತ್ತಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿ ಹಾಗೂ ಬೆಕ್ಕು ಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಬೀದಿ ನಾಯಿ ಗಳಿಗೂ ಸಹ ಲಸಿಕೆ ನೀಡುವುದರೊಂದಿಗೆ ರಾಜ್ಯವನ್ನು 2030ರೊಳಗೆ ರೇಬೀಸ್ ಮುಕ್ತ ರಾಜ್ಯವನ್ನಾಗಿಸಲು ಮುಂದಾಗಬೇಕು ಎಂದರು.
ಬ್ರಹ್ಮಾವರ ತಾಲೂಕು ಸಾಲಿಗ್ರಾಮ ಕೆರೆಕಟ್ಟೆಯ ಖಾಸಗಿಯವರು ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ನ್ಯೂನ್ಯತೆ ಹೊಂದಿದ ಪ್ರಾಣಿಗಳ ಪಾಲನೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಅವುಗಳ ನಿರ್ವಹಣೆ ಸಮರ್ಪಕ ಹಾಗೂ ಕಾನೂನಿನ ರೀತಿಯಲ್ಲಿ ಆಗುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸಾಲಿಗ್ರಾಮ ಸ್ಥಳೀಯ ಸಂಸ್ಥೆ, ಅರಣ್ಯ ಇಲಾಖೆ, ಪಶುಪಾಲನಾ ಇಲಾಖೆ ಹಾಗೂ ಪ್ರಾಣಿದಯಾ ಸಂಸ್ಥೆಯವರು ಭೇಟಿ ನೀಡಿ ಪಂಚನಾಮೆ ನಡೆಸುವುದ ರೊಂದಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ ರೆಡ್ಡಪ್ಪ, ನಗರಸಭೆ ಮಹಾಂತೇಶ್ ಹಂಗರಗಿ, ಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
2093 ಪಶುಗಳಿಗೆ ತುರ್ತು ಚಿಕಿತ್ಸೆ
ಪಶು ಸಂಜೀವಿನಿ ಯೋಜನೆಯಡಿ ರೈತರ ಮನೆ ಬಾಗಿಲಿಗೆ ಪಶು ವೈದ್ಯಕೀಯ ತುರ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲು ಸಹಾಯವಾಣಿ 1962ರಲ್ಲಿ ಆಂಬುಲೆನ್ಸ್ ಅನ್ನು ಒದಗಿಸಲಾಗಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಎಪ್ರಿಲ್‌ನಿಂದ ಈವರೆಗೆ 2093 ಪಶುಗಳು ಇವುಗಳ ಪ್ರಯೋಜನ ಪಡೆದಿವೆ ಎಂದು ಸ್ವರೂಪ ಟಿ.ಕೆ.ತಿಳಿಸಿದರು.







