ಉಡುಪಿ: ನ.26ರಂದು ಭರತ ಮುನಿ ಜಯಂತ್ಯುತ್ಸವ

ಉಡುಪಿ, ನ.20: ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಆಯೋಜಿ ಸುವ ಭರತಮುನಿ ಜಯಂತ್ಯುತ್ಸವ ಈ ಬಾರಿ ನ.26ರಂದು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವಿದುಷಿ ವೀಣಾ ಎಂ.ಸಾಮಗ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀ ನ.26ರ ಬೆಳಗ್ಗೆ 9:30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿ ದ್ದಾರೆ. ಉಡುಪಿ ಯ ವಕೀಲರಾದ ಎಸ್.ಎಸ್.ಪ್ರಸಾದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಾಟ್ಯಾರಾಧನಾ ಕಲಾಕೇಂದ್ರದ ಗುರುವಿದುಷಿ ಸುಮಂಗಲಾ ರತ್ನಾಕರ ಹಾಗೂ ಕೊಡವೂರು ಉಡುಪ ರತ್ನ ಪ್ರತಿಷ್ಠಾನದ ನಿರ್ದೇಶಕಿ ಪೂರ್ಣಿಮಾ ಜನಾರ್ದನ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಸಂಸ್ಥೆ ಪ್ರತಿವರ್ಷ ನೀಡುವ ಭರತ ಪ್ರಶಸ್ತಿಗೆ ಈ ಬಾರಿ ಮೈಸೂರು ವಿವಿಯ ನೃತ್ಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಕೆ.ಕುಮಾರ್, ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಹಾಗೂ ಮೃದಂಗ ಮತ್ತು ಮೊರ್ಸಿಂಗ್ ವಾದಕ ಮೈಸೂರು ಎಂ.ಗುರುರಾಜ್ ಅವರು ಆಯ್ಕೆಯಾಗಿದ್ದಾರೆ. ಕಲಾರ್ಪಣಾ ಪ್ರಶಸ್ತಿಗೆ ಚಿತ್ರಕಲಾವಿದ ಉದಯಕುಮಾರ್ ಹಾಗೂ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿಗೆ ಸಂಸ್ಥೆಯ ವಿದ್ಯಾರ್ಥಿಗಳಾದ ವಿದುಷಿ ಅದಿತಿ ಸನ್ನಿಧಿ, ಅಶ್ವಿನಿ ಮನೋಹರ್ ಹಾಗೂ ಸ್ವಾತಿ ಉಪಾಧ್ಯ ಆಯ್ಕೆಯಾಗಿದ್ದಾರೆ ಎಂದು ವೀಣಾ ಸಾಮಗ ತಿಳಿಸಿದರು.
ಕಾರ್ಯಕ್ರಮದ ಬಳಿ ಸಂಸ್ಥೆಯ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ಗಂಟೆಗೆ ಭರತಮುನಿ ಜಯಂತ್ಯೋತ್ಸವಕ್ಕೆ ವಿಶೇಷವಾಗಿ ಸಂಯೋಜಿಸಿದ ‘ನವರಸ ಕೃಷ್ಣ’ ಭರತನಾಟ್ಯ ಹಾಗೂ ಯಕ್ಷಗಾನ ನೃತ್ಯ ಪ್ರಸ್ತುತಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪವನರಾಜ್ ಸಾಮಗ, ರಾಧಿಕಾರಾವ್, ಶ್ರೀಕಲ್ಯಾಣಿ ಪೂಜಾರಿ ಹಾಗೂ ಅಮೃತಾ ಪ್ರಸಾದ್ ಉಪಸ್ಥಿತರಿದ್ದರು.







