ಉಡುಪಿ: ಫೆ.27ಕ್ಕೆ ಇತಿಹಾಸ ವಿದ್ವಾಂಸರ ಸಮಾವೇಶ
ಉಡುಪಿ, ಫೆ.22: ನಾಡಿನ ಖ್ಯಾತನಾಮ ಇತಿಹಾಸಜ್ಞ ಡಾ.ಪಾದೂರು ಗುರುರಾಜ ಭಟ್ ಇವರ ಜನ್ಮಶತಾಬ್ದಿಯ ನೆನಪಿಗಾಗಿ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಫೆ.27ರಂದು ಇತಿಹಾಸ ಸಂಶೋಧನೆ ಮತ್ತು ಬರಹಗಳಿಂದ ಪ್ರಸಿದ್ಧರಾದ ವಿದ್ವಾಂಸರ ಸಮ್ಮೇಳನ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಪಾದೂರು ವಿಶ್ವನಾಥ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಗುರುರಾಜ ಭಟ್ಟರಿಗೆ ಅತ್ಯಂತ ಪ್ರಿಯ ಸಂಶೋಧನೆಯಾದ ಭಾರತೀಯ ಇತಿಹಾಸ ಹಾಗೂ ವಿಶೇಷವಾಗಿ ದೇವಾಲಯಗಳ, ದೇವತಾಮೂರ್ತಿ ಕುರಿತಾದ ಸಂಶೋಧನೆಯಲ್ಲಿ ಈವರೆಗೆ ಸಾಗಿ ಬಂದ ವಿವರಗಳನ್ನು ಕೇಂದ್ರೀಕರಿಸಿಕೊಂಡು ಈ ಸಮಾವೇಶ ನಡೆಯಲಿದೆ ಎಂದರು.
ಈ ಸಮಾವೇಶದಲ್ಲಿ ಪದ್ಮಶ್ರೀ ಪುರಸ್ಕೃತ ಪುರಾತತ್ವ ಶಾಸ್ತ್ರಜ್ಞ ಕಲ್ಲಿಕೋಟೆಯ ಕೆ.ಕೆ.ಮುಹಮ್ಮದ್, ಬೆಂಗಳೂರಿನ ಇತಿಹಾಸಜ್ಞ ಡಾ.ವಿಕ್ರಮ್ ಸಂಪತ್ ಹಾಗೂ ದೇವಾಲಯಗಳ ಕುರಿತು ಅಮೂಲ್ಯವಾದ ಗ್ರಂಥಗಳನ್ನು ಪ್ರಕಟಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಜ್ಞ ಡಾ.ಸುರೇಂದ್ರನಾಥ ಬೊಪ್ಪರಾಜು ಅವರು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದರು.
ಈ ಸಮ್ಮೇಳನವು ಫೆ.27ರಂದು ಬೆಳಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಪಾದೂರು ಗುರುರಾಜ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನವೂ ನಡೆಯಲಿದೆ ಎಂದು ವಿಶ್ವನಾಥ ಪಾದೂರು ತಿಳಿಸಿದರು.
ಭಾರತೀಯ ಇತಿಹಾಸ, ದೇವಾಲಯಗಳ ಹಾಗೂ ಸಂಸ್ಕೃತಿಯ ವಿವಿಧ ಆಯಾಮಗಳ ಕುರಿತು ಆಸಕ್ತರು ಈ ಸಮಾವೇಶದಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾ.ಪಾದೂರು ಗುರುರಾಜ ಭಟ್ಟ ಸ್ಮಾರಕ ಟ್ರಸ್ಟ್‌ನ ಖಜಾಂಚಿ ಪಿ.ಪರಶುರಾಮ ಭಟ್ಟ, ಸದಸ್ಯರಾದ ವೆಂಕಟೇಶ ಭಟ್ಟ ಹಾಗೂ ರಘುಪತಿ ರಾವ್ ಉಪಸ್ಥಿತರಿದ್ದರು.







