ಉಡುಪಿ: ಅ.27ರಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹ; ಚಿಟ್ಟಾಣಿ ಪ್ರಶಸ್ತಿಗೆ ಥಂಡಿಮನೆ ಶ್ರೀಪಾದ್ ಭಟ್(ಮರಣೋತ್ತರ) ಆಯ್ಕೆ

ಶ್ರೀಪಾದ್ ಭಟ್
ಉಡುಪಿ, ಅ.24: ಪರ್ಯಾಯ ಶ್ರೀಶೀರೂರು ಮಠದ ಆಶ್ರಯದಲ್ಲಿ ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ನಡೆಸಿ ಕೊಂಡು ಬರುತ್ತಿರುವ 19ನೇ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹ ಅಕ್ಟೋಬರ್ 27ರಿಂದ ನವೆಂಬರ್ 2ರವರೆಗೆ ಪ್ರತಿದಿನ ಸಂಜೆ 6:30ರಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ-2026ನ್ನು ಪರ್ಯಾಯ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಅ.27ರಂದು ಸಂಜೆ 6:30ಕ್ಕೆ ರಾಜಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿರುವರು.
ಬಳಿಕ ನವೆಂಬರ್ 02ರವರೆಗೆ ಪ್ರತಿದಿನ ಸಂಜೆ 6:30ಕ್ಕೆ ಯಕ್ಷಗಾನ ಪ್ರದರ್ಶನ ಜರಗಲಿದ್ದು, ಕೊನೆಯ ದಿನದಂದು ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ. ಅಂಬಲಪಾಡಿ ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ನಿರ್ದೇಶಕ ಡಾ.ಟಿ.ಎಸ್.ರಾವ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತ ರಿರುವರು.
ಈ ಬಾರಿಯ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಥಂಡಿಮನೆ ಶ್ರೀಪಾದ ಭಟ್ (ಮರಣೋತ್ತರ) ಹಾಗೂ ಟಿ.ವಿ.ರಾವ್ ಪ್ರಶಸ್ತಿಯನ್ನು ಹಿರಿಯ ಹವ್ಯಾಸಿ ಕಲಾ ವಿದರಾದ ನಿರಂಜನ ಭಟ್ ಮುನ್ನೂರು ಇವರಿಗೆ ನೀಡಲಾಗುವುದು ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಭಾಗವಹಿಸುವಿಕೆ ಯಲ್ಲಿ ಯಕ್ಷಗಾನ ಪ್ರದರ್ಶನವಿರುತ್ತದೆ. ಅ.27ರಂದು ಶ್ರೀರಾಮ ನಿರ್ಯಾಣ, 28ರಂದು ಪ್ರಹ್ಲಾದ ಚರಿತ್ರೆ, 29ರಂದು ದಕ್ಷಯಜ್ಞ, 30ರಂದು ಬ್ರಹ್ಮಕಪಾಲ, 31ರಂದು ಲಂಕಾದಹನ, ನವೆಂಬರ್ 1ರಂದು ಸತ್ಯವಾನ ಸಾವಿತ್ರಿ ಹಾಗೂ ನ.2ರಂದು ರಾಜಾ ಬೃಹದ್ರತ ಪ್ರಸಂಗಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.






