ಉಡುಪಿ: 28 ಶಾಲೆಗಳ 900 ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಸಮಾರೋಪ

ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ವಾರಗಳ ಕಾಲ ಹಮ್ಮಿಕೊಳ್ಳಲಾದ ಉಡುಪಿಯ 28 ಶಾಲೆಗಳ ಸುಮಾರು 900 ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ‘ಕಿಶೋರ ಯಕ್ಷಗಾನ ಸಂಭ್ರಮ’ದ ಸಮಾರೋಪ ಸಮಾರಂಭ ಬುಧವಾರ ನಡೆಯಿತು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಈ ಕಲೆ ಮಕ್ಕಳನ್ನು ಸಂಸ್ಕೃತೀ ಸಂಪನ್ನರಾಗಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಯಕ್ಷಶಿಕ್ಷಣ ಟ್ರಸ್ಟ್ ಇದನ್ನು ನಿರಂತರ ಮುಂದುವರಿಸಿಕೊಂಡು ಬರಲಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಗಣಪತಿ ಶುಭಾಶಂಸ ನೆಗೈದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಉದ್ಯಮಿ ಗಳಾದ ಡಾ.ತಲ್ಲೂರು ಶಿವರಾಮ ಶೆಟ್ಟಿ, ಯು. ವಿಶ್ವನಾಥ ಶೆಣೈ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಉಪಾಧ್ಯಕ್ಷ ಎಸ್. ವಿ.ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಶಿಕ್ಷಣದ ಗುರುಗಳನ್ನು, ಪ್ರಸಾಧನ ತಜ್ಞರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ವಿತರಿಸಲಾಯಿತು. ನಾಲ್ವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.
ನಾರಾಯಣ ಎಂ.ಹೆಗಡೆ ಸ್ವಾಗತಿಸಿದರು. ಎಚ್.ಎನ್.ಶೃಂಗೇಶ್ವರ ವಂದಿಸಿ ದರು. ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.







