ಉಡುಪಿಗೆ 29 ಆರೋಗ್ಯ ಕ್ಷೇಮ ಕಟ್ಟಡಕ್ಕೆ ಮಂಜೂರಾತಿ: ಸಂಸದ ಕೋಟ

ಉಡುಪಿ, ಮಾ.10: ಉಡುಪಿ ಜಿಲ್ಲೆಯಲ್ಲಿ ಆಯುಷ್ಮಾನ್ ಆರೋಗ್ಯ ಕ್ಷೇಮ ಯೋಜನೆಯಡಿ 29 ಆರೋಗ್ಯ ಕೇಂದ್ರ ಕಟ್ಟಡ ಮಂಜೂರಾಗಿದ್ದು, ಪ್ರತಿ ಕಟ್ಟಡದ ವೆಚ್ಚ 65 ಲಕ್ಷಕ್ಕೆ ಅನುಮೋದನೆ ನೀಡಲಾಗುತ್ತಿದೆ. ಈ ಪೈಕಿ ಉಡುಪಿ ವಿಧಾನ ಸಭಾ ಕ್ಷೇತ್ರದ ನಿಡಂಬಳ್ಳಿ, ಕಾರ್ಕಳದ ನಿಟ್ಟೆಯ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೆ ಕಾರ್ಯಾರಂಭಿ ಸಲಿವೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೇಂದ್ರಸರಕಾರದ 15ನೇ ಹಣಕಾಸಿನ ಯೋಜನೆಯಡಿ ಮಂಜೂರಾಗಿರುವ ಕಟ್ಟಡದ ಪೈಕಿ 17 ಉಪಕೇಂದ್ರ ಕಟ್ಟಡದ ಕೆಲಸ ಕಾರ್ಯಗಳು ಪ್ರಗತಿ ಯಲ್ಲಿದ್ದು, 3 ಉಪಕೇಂದ್ರ ಕಟ್ಟಡಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಉಳಿದಂತೆ 7 ಉಪಕೇಂದ್ರಗಳ ಕಾಮಗಾರಿಯನ್ನು ಪ್ರಾರಂಭಿಸಲು ದಿನ ನಿಗದಿ ಪಡಿಸಲಾಗಿದೆ ಎಂದು ಸಂಸದ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಕಟ್ಟಡದ ಅಭಿವೃದ್ಧಿಗೆ ಈಗಾಗಲೇ 34.50 ಕೋಟಿ ರೂ. ಹಣ ಮಂಜೂರಾತಿ ನೀಡಲಾಗಿದ್ದು, ಕಟ್ಟಡವನ್ನು ಜನವಸತಿ ಪ್ರದೇಶದಲ್ಲಿ ಮತ್ತು ಬಡವರು ವಾಸವಾಗಿರು ಸ್ಥಳ ಗುರುತಿಸಿ ನಿರ್ಮಿಸಲು ಕೇಂದ್ರ ಸರಕಾರ ಮಾನದಂಡವನ್ನು ಹೊರಡಿಸಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅವು ಮುಕ್ತವಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.





