ಮಹಿಳೆಗೆ 29.42 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಹೆಬ್ರಿ, ಮೇ 13: ಟ್ರೇಡಿಂಗ್ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಭಾ ಎಂಬವರಿಗೆ ಜ.13ರಂದು ಫೇಸ್‌ಬುಕ್‌ನಲ್ಲಿ ಜಾಹಿರಾತು ಬಂದಿದ್ದು ಅದರಲ್ಲಿ 21,000ರೂ. ಹೂಡಿಕೆ ಮಾಡಿದಲ್ಲಿ ಮಾಸಿಕವಾಗಿ 28,000ರೂ. ಆದಾಯ ಬರುತ್ತದೆ ಎಂದು ತಿಳಿಸಲಾಗಿತ್ತು. ಅದನ್ನು ನಂಬಿದ ಶೋಭಾ 21ಸಾವಿರ ರೂ. ಹಣ ಕಟ್ಟಿ ನೊಂದಣಿ ಮಾಡಿಕೊಂಡಿದ್ದರು. ಜ.14ರಂದು ಆರ್ಥಿಕ ಸಲಹೆಗಾರ ಎಂಬುದಾಗಿ ಜೀತೇಶ್ ಕುಮಾರ್ ಎಂದು ಹೇಳಿ ಕರೆ ಮಾಡಿ, 21,000ರೂ.ಗೆ 2 ದಿನದಲ್ಲಿ 1200ರೂ. ಲಾಭ ಬಂದಿರುವುದಾಗಿ ತಿಳಿಸಿದ್ದನು.
ಸಾಲ ತೀರಿಸಲು ಟ್ರೇಡಿಂಗ್ ಮಾಡುವುದಾಗಿ ಶೋಭಾ ಹೇಳಿದ ಹಿನ್ನೆಲೆಯಲ್ಲಿ ಜಿತೇಶ್, ಚಿನ್ನದ ಮೇಲೆ 10 ಲಕ್ಷ ರೂ. ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿದ್ದನು. ಅದರಂತೆ ಶೋಭಾ ತನ್ನ ಚಿನ್ನವನ್ನು ಅಡವಿಟ್ಟು ಜ.21ರಿಂದ ಮೇ 9ರವರೆಗೆ ಹಂತ ಹಂತವಾಗಿ ಒಟ್ಟು 29,42,940ರೂ. ಹಣವನ್ನು ಆರೋಪಿಗಳ ವಿವಿಧ ಖಾತೆಗೆ ಆನ್ ಲೈನ್ ಮೂಲಕ ಹಾಕಿದ್ದರು. ಆದರೆ ಆರೋಪಿಗಳು ಆ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.




