ಉಡುಪಿ: ಎಸೆಸೆಲ್ಸಿ ಪರೀಕ್ಷೆ-3; ಪ್ರತಿಬಂಧಕಾಜ್ಞೆ ಜಾರಿ

ಉಡುಪಿ, ಜು.3: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಜಿಲ್ಲೆಯ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ಜುಲೈ 5 ರಿಂದ 12 ರವರೆಗೆ ಎಸೆಸೆಲ್ಸಿ ಪರೀಕ್ಷೆ-3 ನಡೆಯಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ದೋಷರಹಿತವಾಗಿ ನಡೆಸಲು ಮತ್ತು ಪರೀಕ್ಷೆ ಸಂದರ್ಭದಲ್ಲಿ ನಡೆಯಬಹುದಾದದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲೂ ಹಾಗೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು, ಸಿಬಂದಿಗಳನ್ನು ಹೊರತುಪಡಿಸಿ ಇತರ ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ/ ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ಅನ್ನು ನಿಷೇಧಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನಿಗದಿ ಪಡಿಸಿರುವ ಸೂಚನೆಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಈ ನಿಷೇಧಾಜ್ಞೆ ಆದೇಶ ನಿಗದಿ ಪಡಿಸಿದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ ಸುತ್ತಲೂ ಜುಲೈ 5ರಿಂದ 12 ರವರೆಗೆ ಪರೀಕ್ಷಾ ಅವಧಿಯಲ್ಲಿ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







