ಉಡುಪಿ: ಆ.30ರಂದು ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ
ಉಡುಪಿ, ಆ.28: ದ್ವೈತಮಟದ ಸ್ಥಾಪಕ, ದ್ವಾರಕೆಯಿಂದ ಬಂದ ಕೃಷ್ಣನ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ, ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸದರೆನ್ನಲಾದ ಶ್ರೀಮಧ್ವಾಚಾರ್ಯರ ಅಂಚೆಚೀಟಿಬಿಡುಗಡೆ ಸಮಾರಂಭ ಆ.30ರಂದು ಸಂಜೆ 4ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಕೇಂದ್ರ ಸರಕಾರದ ಸಂವಹನ ಮತ್ತು ಭಾರತೀಯ ಅಂಚೆ ಇಲಾಖೆಯ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
ಕರ್ನಾಟಕ ವೃತ್ತದ ಮುಖ್ಯ ಪೋಸ್ಟಮಾಸ್ಟರ್ ಜನರಲ್ ಕೆ. ಪ್ರಕಾಶ್ ಶ್ರೀಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಗೊಳಿಸಲಿದ್ದಾರೆ. ಸಮಾರಂಭ ದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ, ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಭಾಗವಹಿಸಲಿದ್ದಾರೆ.
ಅಂಚೆಚೀಟಿ ಪ್ರದರ್ಶನ: ಮಧ್ವಾಚಾರ್ಯ ಸಂಸ್ಮರಣಾ ಅಂಚೆಚೀಟಿ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಅಂಚೆಚೀಟಿ ಸಂಗ್ರಹಕಾರರು (ಫಿಲಾಟಲಿಸ್ಟ್) ಉಡುಪಿ ಹಾಗೂ ಉಡುಪಿಗೆ ಸಂಬಂಧಿಸಿದ ವಿಷಯವಾಗಿ ಮತ್ತು ಆಧ್ಯಾತ್ಮಿಕ ವಿಷಯಗಳನ್ನೊಳಗೊಂಡ ಅಂಚೆ ಚೀಟಿ, ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಪರಿಕರಗಳ ಸಂಗ್ರಹದ ಪ್ರದರ್ಶನ ನಡೆಸಿಕೊಡಲಿದ್ದಾರೆ.
ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿರುವ ಅಪರೂಪದ ವಿಶಿಷ್ಟ ಅಂಚೆಚೀಟಿಗಳ ಈ ಪ್ರದರ್ಶನಕ್ಕೆ ಆ.30ರಂದು ಬೆಳಗ್ಗೆ 9 ಗಂಟೆಗೆ ಪುತ್ತಿಗೆ ಶ್ರೀಗಳು ಮಾಹೆಯ ಉಪ ಕುಲಾಧಿಪತಿ ಹೆಚ್ ಎಸ್ ಬಲ್ಲಾಳ್‌ರ ಉಪಸ್ಥಿತಿಯಲ್ಲಿ ಚಾಲನೆ ನೀಡಲಿದ್ದಾರೆ.
ಈ ಅಂಚೆಚೀಟಿ ಪ್ರದರ್ಶನದ ವೀಕ್ಷಣೆಗೆ ದಿನವಿಡೀ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಪ್ರಸನ್ನಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







