ಸಿಎಸ್‌ಆರ್ ನಿಧಿಯಿಂದ ಬೈಂದೂರು ಕ್ಷೇತ್ರಕ್ಕೆ 30 ಕೋಟಿ ರೂ. ಅನುದಾನ: ಶಾಸಕ ಗುರುರಾಜ್ ಗಂಟಿಹೊಳೆ

ಕುಂದಾಪುರ, ಸೆ.20: ದೇಶದಲ್ಲಿ ವಿವಿಧ ಸಂಸ್ಥೆಗಳು ಸುಮಾರು 45 ಸಾವಿರ ಕೋಟಿ ರೂ.ಗಳನ್ನು ಸಿಎಸ್‌ಆರ್ ನಿಧಿಗಾಗಿ ಮೀಸಲಿರಿಸಿವೆ. ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಶಾಲೆಗಳನ್ನು ಉಳಿಸಲು 300 ಟ್ರೀಸ್ ಯೋಜನೆ ರೂಪಿಸಲಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳ ಸಿಎಸ್‌ಆರ್ ನಿಧಿಯಿಂದ 30 ಕೋಟಿ ರೂ. ಅನುದಾನ ವಿವಿಧ ಉದ್ದೇಶಗಳಿಗೆ ವಿನಿಯೋಗಿಸಿ ಕೊಳ್ಳಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಮರವಂತೆಯ ನೇತಾಜಿ ಸುಭಾಷ್‌ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೆನರಾ ರೋಬೆಕೊ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ನೀಡಲಾದ ಸೈಕಲ್‌ಗಳನ್ನು ಶನಿವಾರ ವಿತರಿಸಿ ಅವರು ಮಾತನಾಡುತಿದ್ದರು.
ಕಳೆದ ವರ್ಷ ಇದೇ ಸಂಸ್ಥೆಯಿಂದ ನಮ್ಮ ಕ್ಷೇತ್ರದ ವಿವಿಧ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆಯಾಗಿದೆ. ಜೀವನದಲ್ಲಿ ಅವರ ನಗುವಿಗೆ ಮತ್ತು ಅವರ ಭವಿಷ್ಯಕ್ಕೆ ಈ ಸೈಕಲ್ ಕಾರಣವಾಗಬೇಕು. ವಿದ್ಯಾರ್ಥಿಗಳು ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ ಶುಭ ಹಾರೈಸಿದರು. ಕೆನರಾ ರೋಬೆಕೊ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಸೈಕಲ್ ಕೊಡುಗೆಯನ್ನು ನೀಡಲು ಸಹಕರಿಸಿದ ಕೆನರಾ ರೋಬೆಕೊ ಸಂಸ್ಥೆಯ ಲೆಕ್ಕಪರಿಶೋಧಕ ಸುನೀಲ್ ರಾವ್ ಅವರನ್ನು ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಡಿ ಕಾರ್ಡ್ ನೀಡಿದ ನಾಗೇಶ ಭಟ್ ಕಡಿಕೆ ಅವರನ್ನು ಗೌರವಿಸಲಾಯಿತು.
ಹೆಮ್ಮಾಡಿ ಜನತಾ ಪಿಯು ಕಾಲೇಜು ಸಂಸ್ಥೆಯ ಅಧ್ಯಕ್ಷ ಗಣೇಶ ಮೊಗವೀರ ಶಾಲಾ ಮಕ್ಕಳಿಗೆ ಕೊಡಮಾಡಿದ ಜೆರ್ಸಿಯನ್ನು ಮತ್ತು ನಾಗೇಶ್ ಭಟ್ ಕಡಿಕೆ ನೀಡಿದ ಐಡಿ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಶಾನ್‌ಭೋಗ್, ಶಾಲಾ ವಾಹನ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ, ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ., ಮಾಜಿ ಸದಸ್ಯ ವಿನಾಯಕ್ ರಾವ್ ಮರವಂತೆ, ನಾಗೇಶ್ ಭಟ್ ಕಡಿಕೆ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಯನ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಮಯ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕ ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.






