ಮಣಿಪಾಲ: ಅ.30, 31ರಂದು ಜೀವಕೋಶ ಚಿಕಿತ್ಸಾ ಸಮಾವೇಶ
ಉಡುಪಿ, ಅ.25: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಎರಡು ಘಟಕಗಳಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಹಾಗೂ ಬಯೋಥೆರಪಿಟಿಕ್ಸ್ ಸಂಶೋಧನಾ ವಿಭಾಗ (ಡಿಬಿಆರ್) ಜೀವಕೋಶ ಚಿಕಿತ್ಸಾ (ಸೆಲ್ ಥೆರಪಿ) ಸಮಾವೇಶದ ಎರಡನೇ ಆವೃತ್ತಿಯನ್ನು ಅ.30 ಮತ್ತು 31ರಂದು ಮಣಿಪಾಲದ ಡಾ.ಟಿ.ಎಂ.ಎ.ಪೈ ಸಭಾಂಗಣ ದಲ್ಲಿ ಆಯೋಜಿಸಲಿದೆ.
ಈ ಸಮಾವೇಶವು ವೇಗವಾಗಿ ವಿಕಸನಗೊಳ್ಳುತ್ತಿರುವ ಜೀವಕೋಶ ಮತ್ತು ಜೀನ್ ಚಿಕಿತ್ಸೆಯ ಕ್ಷೇತ್ರದ ಕುರಿತಂತೆ ಗಮನವನ್ನು ಕೇಂದ್ರೀಕರಿಸಲಿದ್ದು, ಅದರ ಅಪಾರ ಸಾಧ್ಯತೆಯ ಬಗ್ಗೆ ಬೆಳಕು ಚೆಲ್ಲಲ್ಲಿದೆ. ಎರಡು ದಿನಗಳ ಈ ಸಮಾವೇಶದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ವಿಜ್ಞಾನಿಗಳು, ವೈದ್ಯರು, ಸಂಶೋಧಕರು ಮತ್ತು ಉದ್ಯಮ ವೃತ್ತಿಪರರು ಭಾಗವಹಿಸಲಿದ್ದಾರೆ. ಇವರು ಕ್ಷೇತ್ರದ ಇತೀಚಿನ ಬೆಳವಣಿಗೆಗಳು, ಸಂಶೋಧನೆಗಳ ಕುರಿತು ಚರ್ಚಿಸಲಿದ್ದು, ಪುನರುತ್ಪಾದಕ ಔಷಧ ನಾವು ರೋಗಕ್ಕೆ ಚಿಕಿತ್ಸೆ ನೀಡುವ ವಿಧಾನವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ವಿವರಿಸಲಿದ್ದಾರೆ.
ಎರಡು ದಿನಗಳ ಈ ಸಮಾವೇಶ ಸೆಲ್ಯುಲಾರ್ ಥೆರಪ್ಯೂಟಿಕ್ಸ್, ಜೀನ್ ಎಡಿಟಿಂಗ್ ಮತ್ತು ಬಯೋಥೆರಪಿಟಿಕ್ ನಾವೀನ್ಯತೆಯಲ್ಲಿನ ಇತ್ತೀಚಿನ ಪ್ರಗತಿಗಳನ್ನು ತಜ್ಞರ ಮುಂದಿಡಲಿದೆ. ಸಂಶೋಧನೆ ಹಾಗೂ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅದರ ಬಳಕೆಯ ಅಂತರವನ್ನು ಕಡಿಮೆ ಮಾಡಲು ಒತ್ತು ನೀಡಲಿದೆ. ಕಾರ್ಯಕ್ರಮದಲ್ಲಿ ಉಪನ್ಯಾಸ, ತಜ್ಞರ ನಡುವೆ ಸಂವಾದ, ಕ್ಲಿನಿಕಲ್ ಪ್ರಯೋಗ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳ ನಡುವಿನ ಸಹಯೋಗವನ್ನು ಉತ್ತೇಜಿಸುವ ಚರ್ಚೆಗಳನ್ನು ಒಳಗೊಳ್ಳಲಿದೆ.
ದೇಶಾದ್ಯಂತದಿಂದ ಬರುವ ತಜ್ಞ ವೈದ್ಯರು, ಸಂಶೋಧಕರು ಪುನರುತ್ಪಾದಕ ಔಷಧದ ಭವಿಷ್ಯವನ್ನು ರೂಪಿಸುವ ಸವಾಲುಗಳು ಮತ್ತು ಅವಕಾಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಬೆಂಗಳೂರಿನ ಆರಿಜಿನ್ ಆಂಕೊಲಾಜಿಯ ಮುಖ್ಯ ವೈದ್ಯಾಧಿಕಾರಿ ಡಾ. ಅಖಿಲ್ ಕುಮಾರ್, ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ವಿಕ್ರಮ್ ಮ್ಯಾಥ್ಯೂಸ್, ಬೆಂಗಳೂರಿನ ಬಿಆರ್‌ಐಸಿ-ಇನ್‌ಸ್ಟೆಮ್‌ನ ನಿರ್ದೇಶಕಿ ಡಾ.ಮನೀಷಾ ಇನಾಂದಾರ್, ಇಮ್ಯುನೊಎಸಿಟಿಯ ಸ್ಥಾಪಕ ಮತ್ತು ಸಿಇಒ ಡಾ. ರಾಹುಲ್ ಪುರ್ವಾರ್, ಈಸ್ಟ್ ಓಸಿಯಾನ್ ಬಯೋದ ಸಿಇಒ ಡಾ. ದಿನೇಶ್ ಕುಂಡು ಮುಂತಾದವರು ಭಾಗವಹಿಸಲಿದ್ದಾರೆ.
ಈ ಸಮ್ಮೇಳನ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಲು, ಹೊಸ ಹೊಸ ವಿಚಾರಗಳನ್ನು ಹಂಚಿ ಕೊಳ್ಳಲು, ಮುಕ್ತ ಚರ್ಚೆ ನಡೆಸಲು ಅವಕಾಶ ಒದಗಿಸುತ್ತದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ವೈದ್ಯಕೀಯ ವೃತ್ತಿಪರರು ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.







