ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ಡಿ.31ರಿಂದ ರೆಗ್ಯುಲರ್ ಸಂಚಾರ

ಉಡುಪಿ, ಡಿ.30: ಕಳೆದ ದಿನಗಳಿಂದ ಪ್ರಾಯೋಗಿಕ ಸಂಚಾರ ಹಾಗೂ ಇಂದು ಉದ್ಘಾಟನಾ ಸಂಚಾರ ನಡೆಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಾಳೆಯಿಂದ (ಡಿ.31)ತನ್ನ ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಎಂದಿನ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.20646 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ರೈಲು ಗುರುವಾರ ಹೊರತು ಪಡಿಸಿ ವಾರದ ಉಳಿದ ಆರು ದಿನಗಳಲ್ಲಿ ಬೆಳಗ್ಗೆ 8:30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಪ್ರಯಾಣ ಬೆಳೆಸಲಿದ್ದು, ಅಪರಾಹ್ನ 1:15ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.
ರೈಲು ನಂ.20465 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಹ ಗುರುವಾರ ಹೊರತು ಪಡಿಸಿ ವಾರದ ಉಳಿದ ದಿನಗಳಲ್ಲಿ ಸಂಜೆ 6:10ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಟು ಅದೇ ದಿನ ರಾತ್ರಿ 10:45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.
ಈ ರೈಲಿಗೆ ನಡುವೆ ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಸಂಪೂರ್ಣ ಹವಾನಿಯಂತ್ರಿತವಾದ ಈ ರೈಲು ಎಂಟು ಕೋಚ್‌ಗಳನ್ನು ಹೊಂದಿರುತ್ತದೆ.
ಉಡುಪಿಯಲ್ಲಿ ಸ್ವಾಗತ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಶನಿವಾರ ಉದ್ಘಾಟನೆಗೊಂಡ ವಂದೇ ಭಾರತ್ ರೈಲು ಬೆಳಗ್ಗೆ 12:12ಕ್ಕೆ ಮಂಗಳೂರಿನಿಂದ ಪ್ರಯಾಣ ಬೆಳೆಸಿದ್ದು ಸುರತ್ಕಲ್, ಮೂಲ್ಕಿ, ಪಡುಬಿದ್ರಿ, ಉಡುಪಿ, ಕುಂದಾಪುರ ಹಾಗೂ ಕಾರವಾರಗಳಲ್ಲಿ ಸೇರಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಉಡುಪಿ ರೈಲು ನಿಲ್ದಾಣಕ್ಕೆ 1:20ಕ್ಕೆ ಆಗಮಿಸಿದ ರೈಲನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ನಾಯಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು, ಹಿರಿಯ ನಾಯಕರೊಂದಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಎಸ್ಪಿ ಡಾ.ಅರುಣ್ ಕೆ., ಸಿಇಓ ಪ್ರಸನ್ನ ಎಚ್. ಉಪಸ್ಥಿತರಿದ್ದರು.







