ಅಧಿಕಾರಿಗಳಿಗೆ ಮಾ.31ರೊಳಗೆ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಪೂರ್ಣಗೊಳಿಸುವ ವಿಶ್ವಾಸ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಮಾ.12: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು, ಸಾಕಷ್ಟು ಜನಾಕ್ರೋಶಕ್ಕೂ ಕಾರಣವಾಗಿರುವ ಇಂದ್ರಾಳಿಯ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಮಾಚ್ 31ರೊಳಗೆ ಪೂರ್ಣ ಗೊಳಿಸುವ ವಿಶ್ವಾಸವನ್ನು ರೈಲ್ವೆ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇರುವ ಇಂದ್ರಾಳಿಯ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರೊಂದಿಗೆ ಇಂದು ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಇಂದು ಸಂಜೆ ‘ವಾರ್ತಾಭಾರತಿ’ ಯೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ತಾನು ರೈಲ್ವೆಯ ಕಾರ್ಯನಿರ್ವಾಹಕ ಇಂಜಿಯರ್ ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿಯ ಪ್ರಗತಿಯ ಕುರಿತು ಚರ್ಚಿಸಿದ್ದು, ಯೋಜಿತ ರೀತಿಯಲ್ಲಿ ಎಲ್ಲಾ ಕಾಮಗಾರಿಯನ್ನು ವಿಳಂಬಕ್ಕೆ ಆಸ್ಪದ ನೀಡದೇ ನಡೆದರೆ ಮಾ.31 ರೊಳಗೆ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಗರ್ಡರ್ಗಳ ಜೋಡಣೆ ಹಾಗೂ ವೆಲ್ಡಿಂಗ್ ಕಾಮಗಾರಿ ಮುಗಿದಿದೆ. ರೈಲ್ವೆಯಿಂದ ಬಂದಿರುವ ಇಂಜಿನಿಯರ್ ಗಳು ಪ್ರತಿ ಜಾಯಿಂಟ್ನ್ನು ಪರಿಶೀಲಿಸುತಿದ್ದಾರೆ. ಇದು ಇನ್ನು ಮೂರು ದಿನಗಳಲ್ಲಿ ಮುಗಿಯಬಹುದು. ಆ ಬಳಿಕ ಅವರು ಕಾಮಗಾರಿಯ ಬಗ್ಗೆ ವಿಸ್ತೃತವಾದ ವರದಿಯನ್ನು ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ನೀಡಲಿದ್ದಾರೆ. ಅವರು ಬಂದು ಪರಿಶೀಲಿಸಿ ಓಕೆ ಮಾಡಿದ ನಂತರ ಮುಂದೆ ಕಬ್ಬಿಣದ ಸೇತುವೆಯನ್ನು ಕೂರಿಸುವ ಕಾಮಗಾರಿ ನಡೆಯಲಿದೆ ಎಂದರು.
ಸೇತುವೆಯನ್ನು ಮುಂದಕ್ಕೆ ಒಯ್ಯಲು ಸಪೋರ್ಟ್ಗಾಗಿ 700ರಷ್ಟು ಕ್ರಿಬ್ಸ್ಗಳ (ಪೆಟ್ಟಿಗೆಯಾಕಾರದ ರಚನೆ) ಅಗತ್ಯವಿದೆ. ಈಗಾಗಲೇ 400ರಷ್ಟು ಕ್ರಿಬ್ಗಳು ಉಡುಪಿಗೆ ಬಂದಿವೆ. ಮೈಸೂರಿನಿಂದ ಸುಮಾರು 200ರಷ್ಟು ಇಂದು ರಾತ್ರಿ ಅಥವಾ ನಾಳೆ ಬರಲಿದೆ. ಇನ್ನೂ 100ರಷ್ಟು ಹುಬ್ಬಳ್ಳಿಯಿಂದ ಬರಲಿವೆ. ಈ ಕಾಮಗಾರಿಗೆ ರೈಲ್ಸ್ಗಳ ಅಗತ್ಯವಿದ್ದು ಅದನ್ನು ಮುಲ್ಕಿಯಿಂದ ತರಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದಾದ ನಂತರ ಕಬ್ಬಿಣದ ಸೇತುವೆಯನ್ನು ಅಡ್ಡ ಕೂರಿಸಲು ಒಂದು ದಿನದ ಅಗತ್ಯವಿದೆ. ಇದಕ್ಕಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಒಂದು ದಿನ ತಡೆಹಿಡಿಯ ಬೇಕಾಗುತ್ತದೆ. ಅವುಗಳಿಗೆ ಬದಲಿ ವ್ಯವಸ್ಥೆ ಮಾಡಿದ ಬಳಿಕವಷ್ಟೇ ಈ ಕಾಮಗಾರಿ ಮಾಡಲು ಸಾಧ್ಯವಿದೆ. ಇದಕ್ಕಾಗಿ ಸಾಕಷ್ಟು ಪೂರ್ವಯೋಜನೆ ಅಗತ್ಯವಿದೆ ಎಂದು ಡಾ. ವಿದ್ಯಾಕುಮಾರಿ ತಿಳಿಸಿದರು.
ಕಬ್ಬಿಣದ ಸೇತುವೆಯನ್ನು ಅಡ್ಡ ಕೂರಿಸಿದ ಬಳಿಕ ಕಾಂಕ್ರಿಟ್ ಕೆಲಸಗಳಿಗೆ 2-3 ದಿನಗಳ ಅಗತ್ಯವಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಯೋಜಿತ ರೀತಿಯಲ್ಲಿ ನಡೆದರೆ ಮಾ.31ರೊಳಗೆ ಎಲ್ಲಾ ಕಾಮಗಾರಿಗಳು ಮುಗಿಯುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎ.ಇ ಮಂಜುನಾಥ್, ಎಸ್.ಎಸ್.ಇ. ಗಂಗಾಧರ್ ನಾಯಕ್ ಉಪಸ್ಥಿತರಿದ್ದರು.