ಉಡುಪಿ: ಮೇ 31ರಂದು ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ

ಉಡುಪಿ, ಮೇ 29: ಯಕ್ಷಗಾನ ಕಲಾರಂಗವು ಕಳೆದ 26 ವರ್ಷಗಳಿಂದ ನಡೆಸುತ್ತಾ ಬಂದಿರುವ ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ ಈ ಬಾರಿ ಮೇ 31ರಂದು ರವಿವಾರ ಪರ್ಯಾಯ ಶೀರೂರು ಮಠದ ಆಶ್ರಯ ದಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಡೀ ದಿನ ನಡೆಯಲಿದೆ.
ಬೆಳಗ್ಗೆ 9 ರಿಂದ ಸಮಸ್ತ ಯಕ್ಷಗಾನ ಕಲಾವಿದರಿಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆಯಲಿದೆ. 10:30ಕ್ಕೆ ಪರ್ಯಾಯ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕಲಾಮಂಡಲಮ್ ನಂದ ಕುಮಾರ್ ಮತ್ತು ತಂಡದವರಿಂದ ‘ಕಲ್ಯಾಣ ಸೌಗಂಧಿಕಂ’ ತುಳ್ಳಲ್ ತ್ರಯಮ್ ಪ್ರದರ್ಶನಗೊಳ್ಳಲಿದೆ.
ಅಪರಾಹ್ನ 12:00ರಿಂದ ಕಲೆ-ಕಲಾವಿದ-ಪ್ರೇಕ್ಷಕ: ಸಮನ್ವಯ ವಿಷಯದ ಕುರಿತು ಕಲಾವಿದರು ಚರ್ಚೆ ನಡೆಸಲಿದ್ದು, ಅರ್ಥಧಾರಿ, ಪ್ರಸಂಗಕರ್ತ ಪವನ್ ಕಿರಣ್‌ಕೆರೆ ಸಮನ್ವಯಕಾರರಾಗಿರುತ್ತಾರೆ.
ಅಪರಾಹ್ನ 2:30ರಿಂದ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದ್ದು, ಪರ್ಯಾಯ ಶೀರೂರು ಮಠಾಧೀಶ ರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಉದ್ಯಮಿ ಡಾ.ಜಿ. ಶಂಕರ್ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಭಾಶಂಸನೆ ಮಾಡಲಿದ್ದಾರೆ.
ಮುಖ್ಯಅತಿಥಿಗಳಾಗಿ ಭಾಗವಹಿಸುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಲಾವಿದರಿಗೆ ಉಡುಗೊರೆ ವಿತರಿಸುವರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಗೃಹ ನಿರ್ಮಾಣದ ಉಡುಗೊರೆ ವಿತರಿಸುವರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಆನಂದ ಸಿ.ಕುಂದರ್, ಪಣಂಬೂರು ವಾಸುದೇವ ಐತಾಳ್, ಪಿ. ಪುರುಷೋತ್ತಮ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ ಮತ್ತು ಸಾಧು ಸಾಲಿಯಾನ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕಲಾವಿದರಿಗೆವೈದ್ಯಕೀಯ ನೆರವು, ಗೃಹನಿರ್ಮಾಣದ ಉಡುಗೊರೆ ವಿತರಿಸಲಾಗುವುದು. ಯಕ್ಷನಿಧಿಯ ಸದಸ್ಯರಾದ ವೃತ್ತಿಮೇಳದ ಸುಮಾರು 1000 ಕಲಾವಿದರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






